ಹಗರಿಬೊಮ್ಮನಹಳ್ಳಿ: ‘ಉತ್ತಮವಾಗಿ ಮಾಗಿ ಮಾಡಿ ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇನೆ, ಹಿಂಗಾರು ಉತ್ತಮವಾಗಿಯೇ ಬೆಳೆದಿದೆ, ಆದರೆ ರಾಗಿ ಬೆಳೆ ಕಾಳು ಕಟ್ಟಿಲ್ಲ, ಸಾಲ ಮಾಡಿ ಬೀಜ, ಗೊಬ್ಬರ ತಂದು ಸುರಿದಿದ್ದೆ, ಈಗ ಸಾಲಗಾರನಾಗುವ ಭಯ ಆವರಿಸಿದೆ’. ಇದು ತಾಲ್ಲೂಕಿನ ಹೊಸಕೇರಿ ಗ್ರಾಮದ ರೈತರೊಬ್ಬರ ಅಳಲು.
ರೈತ ಮರಿಸ್ವಾಮಪ್ಪರ ಕೊಟ್ರೇಶಪ್ಪ ಅವರು ಒಂದೂವರೆ ಎಕರೆ ಭೂಮಿಯಲ್ಲಿ ಶಿವಪುರದ ಅಂಗಡಿಯೊಂದರಲ್ಲಿ ಬಿತ್ತನೆ ಬೀಜ ಖರೀದಿಸಿ ಬಿತ್ತನೆ ಮಾಡಿದ್ದರು. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ ಕೊಯ್ಲಿಗೆ ಬಂದಿದ್ದ ತೆನೆಯಲ್ಲಿ ಕಾಳು ಕಟ್ಟಿಲ್ಲ.
ರೈತರು ನಷ್ಟದ ಹಾದಿಯಲ್ಲಿದ್ದಾರೆ. ರೈತರ ಕೊಳವೆ ಬಾವಿಯಲ್ಲಿ ಸಾಕಷ್ಟು ನೀರಿನ ಪ್ರಮಾಣ ಇದೆ, ಬೇರೆ ಬೆಳೆಗಳು ಉತ್ತಮವಾಗಿಯೇ ಫಸಲು ಬಂದಿವೆ, ಈ ಬಾರಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದುದರಿಂದ ಎರಡು ಎಕರೆ ರಾಗಿ ಬೆಳೆದಿದ್ದರು. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರದಾಗಿದೆ.
ಈ ಬಾರಿ ತಾಲ್ಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಒಟ್ಟು 4,038 ಹೆಕ್ಟೇರ್ ರಾಗಿ ಬೆಳೆಯಲಾಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವುದರಿಂದ ಬಹುತೇಕ ರೈತರು ರಾಗಿಯ ಕಡೆಗೆ ಮುಖ ಮಾಡಿದ್ದರು. ಕಳಪೆ ಬಿತ್ತನೆ ಬೀಜದಿಂದ ನಷ್ಟ ಮಾಡಿಕೊಂಡಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು, ಕಳಪೆ ಬೀಜ ಮಾರಾಟ ಮಾಡುತ್ತಿರುವ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ರೈತ ಸಂಘದ ಟಿ.ರವಿಕುಮಾರ್ ಒತ್ತಾಯಿಸಿದ್ದಾರೆ.
ರಾಗಿ ಬೀಜ ನಕಲಿಯಾಗಿದೆ. ಹೀಗಾಗಿ ಕಾಳು ಕಟ್ಟಿಲ್ಲ. ನಕಲಿ ಬಿತ್ತನೆ ಬೀಜ ಮಾರಾಟ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ರೈತರಿಗೆ ಸೂಕ್ತ ಪರಿಹಾರ ನೀಡಬೇಕು.–ಮರಿಸ್ವಾಮಪ್ಪನವರ ನಾಗರಾಜ, ರೈತ
ಈವರೆಗೂ ರಾಗಿ ಬೆಳೆ ಕುರಿತಂತೆ ಯಾವುದೇ ದೂರು ಬಂದಿಲ್ಲ. ಕಾಳು ಕಟ್ಟದ ಜಮೀನಿಗೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.–ನಾಗಾರ್ಜುನ, ಸಹಾಯಕ ಕೃಷಿ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.