ಪ್ರಜಾವಾಣಿ ವಾರ್ತೆ
ಹೊಸಪೇಟೆ (ವಿಜಯನಗರ): ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಕುರಿತು ಕಾಂಗ್ರೆಸ್ ಹೈಕಮಾಂಡ್‌ನಿಂದ ಖಚಿತ ಭರವಸೆ ಸಿಗುವವರೆಗೂ ದೆಹಲಿಯಲ್ಲೇ ಹೋರಾಟ ಮುಂದುವರಿಸಲು ಕರ್ನಾಟಕದ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ ನಿರ್ಧರಿಸಿದೆ.
‘ಕರ್ನಾಟಕದ ಅಲೆಮಾರಿ ಸಮುದಾಯಗಳಿಂದ ‘ದೆಹಲಿ ಚಲೋ’ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಭಾನುವಾರ ನಡೆದ ಸುದೀರ್ಘ ಮಾತುಕತೆಯಲ್ಲಿ, ಸಮಸ್ಯೆ ಬಗೆಹರಿಸುವ ಪ್ರಕ್ರಿಯೆ ಕುರಿತು ಕಾಂಗ್ರೆಸ್ ನಾಯಕರು ಸಮಯ ಕೇಳಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಕಡೆಯಿಂದ ಖಚಿತ ಅಭಿಪ್ರಾಯ ಹೊರಬೀಳುವ ತನಕ ದೆಹಲಿ ಬಿಡದಿರಲು ಸಮಿತಿ ನಿರ್ಧರಿಸಿದೆ’ ಎಂದು ರಾಜ್ಯದ ನಿಯೋಗದೊಂದಿಗೆ ತೆರಳಿರುವ ಸಣ್ಣಮಾರೆಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
‘ಒಳಮೀಸಲಾತಿ ಹಂಚಿಕೆಯಲ್ಲಿ ಕರ್ನಾಟಕದ ಅಲೆಮಾರಿ ಸಮುದಾಯಕ್ಕೆ ಆಗಿರುವ ಘೋರ ಅನ್ಯಾಯವನ್ನು ಪ್ರತಿಭಟಿಸಿ ಹಾಗೂ ಹೈಕಮಾಂಡ್ ಮಧ್ಯಪ್ರವೇಶ ಮಾಡಿ ಆಗಿರುವ ತಪ್ಪನ್ನು ಸರಿಪಡಿಸಬೇಕು ಎಂದು ಒತ್ತಾಯಿಸಲು ಕರ್ನಾಟಕದಿಂದ ಬಂದ ನೂರಾರು ಜನ ಅಲೆಮಾರಿಗಳು, ಕಲಾವಿದರು ಭಾನುವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ಆಕ್ರೋಶಭರಿತ ಪ್ರತಿಭಟನೆ ನಡೆಸಿದರು.
ರಾಮ, ಲಕ್ಷ್ಮಣ, ರಾವಣ, ದುರ್ಗ, ಆಂಜನೇಯ ಮುಂತಾದ ವೇಷ ತೊಟ್ಟ ಕಲಾವಿದರು ತಮ್ಮ ಕಲಾ ರೂಪಗಳಲ್ಲೇ ತಮ್ಮ ನೋವನ್ನು ಹೊರಹಾಕಿದರು. ತಮಗೆ ತಾವೇ ಚಾಟಿಯಲ್ಲಿ ಬಿಗಿದುಕೊಳ್ಳುತ್ತಿದ್ದರು. ಇಡೀ ಸಮಾಜಕ್ಕೆ ಆ ಏಟು ಬೀಳುವಂತೆ ಗೋಚರಿಸುತ್ತಿತ್ತು’ ಎಂದು ಅವರು ತಿಳಿಸಿದರು.
ಬೆಳಿಗ್ಗೆ 10ರಿಂದ 12.30ರವರೆಗೆ ಪ್ರತಿಭಟನೆ ನಡೆಸಿ ನಂತರ ಕಾಂಗ್ರೆಸ್ ಮುಖಂಡರನ್ನು ಕಾಣಲು ಕಾಂಗ್ರೆಸ್ ಕಚೇರಿಯ ಕಡೆ ಪ್ರತಿಭಟನಾಕಾರರು ಹೆಜ್ಜೆಹಾಕಿದರು. ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಪರವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ದತ್ ಮಾತುಕತೆಗೆ ಬಂದಿದ್ದರು. ನಿರ್ಧಾರಕ್ಕೆ ಸ್ವಲ್ಪ ಸಮಯಾವಕಾಶ ಬೇಕು ಎಂದು ಕೇಳಿದರು.
‘ಖಚಿತ ತೀರ್ಮಾನ ಆಗುವ ತನಕ ನಾವು ದೆಹಲಿಯನ್ನು ತೊರೆಯುವ ಮಾತೇ ಇಲ್ಲ. ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶ ಮಾಡಿ ಈ ಸಮಸ್ಯೆಗೆ ಪರಿಹಾರ ಮಾರ್ಗ’ ಎಂದು ಸಭೆಯ ಕೊನೆಯಲ್ಲಿ ನಿರ್ಧರಿಸಲಾಯಿತು.
ಬಾಲ ಗುರುಮೂರ್ತಿ, ಇ.ಎಸ್.ಪ್ರಭಾಕರ್, ನೂರ್ ಶ್ರೀಧರ್, ಶೇಷಪ್ಪ, ಅಂಬಣ್ಣ, ಬಸವರಾಜ, ಮಂಜುನಾಥ್, ಚಿನ್ನು, ರಾಜೇಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.