ADVERTISEMENT

ರಾಜಕಾರಣದಲ್ಲಿ ಸಂಚಲನ: ಕಾಂಗ್ರೆಸ್ ಶಾಸಕ ಗವಿಯಪ್ಪ ಮನೆಗೆ ಆನಂದ್ ಸಿಂಗ್ ಭೇಟಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2023, 7:46 IST
Last Updated 20 ಅಕ್ಟೋಬರ್ 2023, 7:46 IST
<div class="paragraphs"><p>ಆನಂದ್ ಸಿಂಗ್</p></div>

ಆನಂದ್ ಸಿಂಗ್

   

ಹೊಸಪೇಟೆ (ವಿಜಯನಗರ): ಮಾಜಿ ಸಚಿವ ಆನಂದ್ ಸಿಂಗ್ ಅವರು ಶುಕ್ರವಾರ ಬೆಳಿಗ್ಗೆ ಶಾಸಕ ಎಚ್‌.ಆರ್‌.ಗವಿಯಪ್ಪ ಅವರ ಇಲ್ಲಿನ ಮನೆಗೆ ದಿಢೀರ್‌ ಭೇಟಿ ನೀಡಿದ್ದು, ಹೊಸಪೇಟೆಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.

‘ಈ ಭೇಟಿಗೆ ಯಾವ ರಾಜಕೀಯ ಉದ್ದೇಶವೂ ಇಲ್ಲ, ಗವಿಯಪ್ಪ ಅವರ ತಂದೆಯವರ ಆರೋಗ್ಯ ವಿಚಾರಿಸಲು ಬಂದೆ’ ಎಂದಷ್ಟೇ ಹೇಳಿದ ಆನಂದ್ ಸಿಂಗ್ ಸ್ಥಳದಿಂದ ನಿರ್ಗಮಿಸಿದರು. ಇದಕ್ಕೆ ಮೊದಲು ಅವರು ಸುಮಾರು ಅರ್ಧ ಗಂಟೆ  ಶಾಸಕರ ಜತೆಗೆ ಮಾತುಕತೆ ನಡೆಸಿದ್ದರು.

ADVERTISEMENT

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಬಿ.ಶ್ರೀರಾಮುಲು ಸ್ಪರ್ಧಿಸುವ ಸಾಧ್ಯತೆ ಇದೆ. ಹಾಗಿದ್ದ ಪಕ್ಷದಲ್ಲಿ ಅವರಿಗೆ ಬೆಂಬಲ ನೀಡಬೇಕು ಎಂಬ ಕೋರಿಕೆ ಸಲ್ಲಿಸಲು ಆನಂದ್‌ ಸಿಂಗ್ ಅವರು ಗವಿಯಪ್ಪ ಅವರ ಮನೆಗೆ ಬಂದಿರಬಹುದು ಎಂದು ಮೂಲಗಳು ತಿಳಿಸಿವೆ.

ಆನಂದ್ ಸಿಂಗ್ ನಿರ್ಗಮಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಗವಿಯಪ್ಪ, ‘ಅವರು ಪಕ್ಷಕ್ಕೆ ಬಂದರೆ ಸ್ವಾಗತ‘ ಎಂದಷ್ಟೇ ಹೇಳಿದರು. ಕೆಲವು ಅಭಿವೃದ್ಧಿ ವಿಚಾರಗಳ ಕುರಿತು ಚರ್ಚಿಸಿದ್ದೇವೆ ಎಂದರು.

ನಾಲ್ಕು ತಿಂಗಳ ಬಳಿಕ ಮತ್ತೆ ಸಕ್ರಿಯ: ವಿಧಾನಸಭಾ ಚುನಾವಣೆಯಲ್ಲಿ ಪುತ್ರ ಸಿದ್ಧಾರ್ಥ ಸಿಂಗ್ ಸೋತ ಬಳಿಕ ಆನಂದ್ ಸಿಂಗ್ ಅವರು ರಾಜಕಾರಣದಿಂದ ಬಹುತೇಕ ದೂರವೇ ಉಳಿದಿದ್ದರು. ನಾಲ್ಕೂವರೆ ತಿಂಗಳ ಬಳಿಕ ಇದೇ  1ರಂದು ತಮ್ಮ ಕಮಲಾಪುರದ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ಬಿಡಲ್ಲ, ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದಿದ್ದರು ಹಾಗೂ ಅಭಿವೃದ್ಧಿ ಯೋಜನೆಗಳು ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. 120 ಎಕರೆ ಸರ್ಕಾರಿ ಜಮೀನು ನೀಡಿದರೆ ರೈತರಿಗಾಗಿ ತಾವೇ ಸಕ್ಕರೆ ಕಾರ್ಖಾನೆ ಸ್ಥಾಪಿಸುವುದಾಗಿ ಹೇಳಿದ್ದರು.

ಆದರೆ ಆನಂದ್ ಸಿಂಗ್ ಅವರ ಈ ಸಕ್ಕರೆ ಕಾರ್ಖಾನೆ ಪ್ರಸ್ತಾವವನ್ನು ತಿರಸ್ಕರಿಸಿದ್ದ ಗವಿಯಪ್ಪ, ಸಕ್ಕರೆ ಕಾರ್ಖಾನೆ ಸ್ಥಾಪಿಸುವುದಾದರೆ ಸ್ವಾಗತ, ಆದರೆ ಖಾಸಗಿ ಜಮೀನು ಖರೀದಿಸಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲಿ ಎಂದು ಸಲಹೆ ನೀಡಿದ್ದರು.

ಇಷ್ಟೆಲ್ಲ ಬೆಳವಣಿಗೆಯ ಬಳಿಕ ಆನಂದ್ ಸಿಂಗ್ ಅವರು ಶುಕ್ರವಾರ ಗವಿಯಪ್ಪ ಅವರನ್ನು ಖುದ್ದು ಭೇಟಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.