ADVERTISEMENT

ಹಂಪಿಯಲ್ಲಿ ಯೋಗ ಉತ್ಸವ: ಕಾರ್ಯಕ್ರಮಕ್ಕೆ ವಚನಾನಂದ ಸ್ವಾಮೀಜಿ ನೇತೃತ್ವ

​ಪ್ರಜಾವಾಣಿ ವಾರ್ತೆ
Published 15 ಮೇ 2022, 4:17 IST
Last Updated 15 ಮೇ 2022, 4:17 IST
ಹಂಪಿಯಲ್ಲಿ ಯೋಗ ಉತ್ಸವ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಚಾಲನೆ ನೀಡಿದರು.
ಹಂಪಿಯಲ್ಲಿ ಯೋಗ ಉತ್ಸವ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಚಾಲನೆ ನೀಡಿದರು.    

ಹೊಸಪೇಟೆ (ವಿಜಯನಗರ): ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಒಂದು ತಿಂಗಳು ಹಮ್ಮಿಕೊಂಡಿರುವ ಯೋಗ ಉತ್ಸವ ಕಾರ್ಯಕ್ರಮ ವಿಶ್ವಪ್ರಸಿದ್ಧ ಹಂಪಿಯಲ್ಲಿ ಭಾನುವಾರ ಬೆಳಿಗ್ಗೆ ನಡೆಯಿತು.

ಶ್ವಾಸ ಯೋಗ ಸಂಸ್ಥೆ, ಪತಂಜಲಿ ಯೋಗ ಸಂಸ್ಥೆ, ಕೇಂದ್ರ ಸರ್ಕಾರದ ಮೊರಾರ್ಜಿ ದೇಸಾಯಿ ಯೋಗ ವಿಜ್ಞಾನ ಸಂಸ್ಥೆ ಹಾಗೂ ಆಯುಷ್ ಇಲಾಖೆಯ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ವಾಸ ಯೋಗ ಸಂಸ್ಥೆ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರು ಯೋಗ ಹೇಳಿಕೊಟ್ಟರು.

ಮೂಡಣದಲ್ಲಿ ಸೂರ್ಯ ಉದಯವಾಗುವುದಕ್ಕೂ ಮುನ್ನವೇ ವಿವಿಧ ಕಡೆಗಳಿಂದ ನೂರಾರು ಜನ ಬಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಂಪಿ ಸಪ್ತಸ್ವರ ಮಂಟಪ, ಕಲ್ಲಿನ ರಥದ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೂರಾರು ಜನ ಒಟ್ಟಿಗೆ ಯೋಗ ಮಾಡಿದರು.

ಓದಿ...ನಾನು ಯೋಗ ಮಾಡುವುದಿಲ್ಲ, ದೊಡ್ಡ ಸೋಂಬೇರಿ: ಸಚಿವ ಆನಂದ್ ಸಿಂಗ್

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರು ಜನರೊಂದಿಗೆ ಯೋಗ ಮಾಡಿದರು. ಕೆಲ ವಿದೇಶಿಯರು ಸ್ಥಳೀಯರೊಂದಿಗೆ ಯೋಗ ಮಾಡಿದರು.



ಇದಕ್ಕೂ ಮುನ್ನ ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದ ವಿನಯ್ ಗುರೂಜೀ, ಮೌನದ ಮೂಲಕ ಭಗವಂತನ ದಾರಿ ಸೇರುವ ಮಾರ್ಗವೇ ಯೋಗ. ಸಂಸ್ಕಾರ, ಧರ್ಮ, ನಡತೆಗೆ ಇಡೀ ಜಗತ್ತು ಭಾರತಕ್ಕೆ ತಲೆಬಾಗುತ್ತಿದೆ. ಒಳ್ಳೆಯ ಆರೋಗ್ಯವಿದ್ದರೆ ಒಳ್ಳೆಯ ಸಮಾಜ ನಿರ್ಮಾಣ ಸಾಧ್ಯ ಎನ್ನುವುದು ವಿಶ್ವಕ್ಕೆ ಗೊತ್ತಾಗಿದೆ ಎಂದರು.

ವಚನಗಳ ಮೂಲಕ ಸಮಾಜ ತಿದ್ದುವ, ಯೋಗದಿಂದ ಸಮಾಜವನ್ನು ರೋಗಮುಕ್ತ ಮಾಡಲು ವಚನಾನಂದ ಸ್ವಾಮೀಜಿ ಶ್ರಮಿಸುತ್ತಿದ್ದಾರೆ. ಮಕ್ಕಳಿಗೆ ಎಲ್ಲ ವಿದ್ಯೆಗಳ ಜೊತೆಗೆ ಯೋಗ ವಿದ್ಯೆ ಕಲಿಸಿಕೊಡಬೇಕು.

ಈ ಯೋಗ ಕಾರ್ಯಕ್ರಮದ ಮೂಲಕ ಹಾಳು ಹಂಪಿ ಹೊಸ ಹಂಪಿ ಆಗಿ ಬದಲಾಗುವ ಕಾಲ ಬಂದಿದೆ. ಹಂಪಿಯಲ್ಲಿ
ಯೋಗ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಹೇಳಿದರು.

ADVERTISEMENT


ವಚನಾನಂದ ಸ್ವಾಮೀಜಿ ಮಾತನಾಡಿ, ದೇಶದ 75 ಪ್ರವಾಸಿ ತಾಣಗಳಲ್ಲಿ ಯೋಗೋತ್ಸವ ನಡೆಸಲಾಗುತ್ತಿದ್ದು, ಅದರ ಭಾಗವಾಗಿ ಹಂಪಿಯಲ್ಲಿ ಉತ್ಸವ ಆಯೋಜಿಸಲಾಗಿದೆ. ಇದರ ಜವಾಬ್ದಾರಿ ನಮ್ಮ ಸಂಸ್ಥೆಗೆ ವಹಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಇದೇ ವೇಳೆ ಯೋಗ ಅಭಿಯಾನ ರಥಕ್ಕೆ ಚಾಲನೆ ನೀಡಲಾಯಿತು. ವಿಜಯನಗರ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ರಥ ಸಂಚರಿಸಲಿದೆ.

ಪತಂಜಲಿ ಯೋಗ ಸಮಿತಿಯ ಪ್ರಭಾರಿ ಭವರಲಾಲ್ ಆರ್ಯ, ಆಯುಷ್ ಇಲಾಖೆಯ ಉಪನಿರ್ದೇಶಕಿ ಡಾ. ಸುಜಾತಾ, ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ಇದ್ದರು.

ನಿರ್ಬಂಧ ಉಲ್ಲಂಘಿಸಿ ವಾಹನಗಳ ಸಂಚಾರ
ಹಂಪಿ ವಿಜಯ ವಿಠಲ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ವಾಹನಗಳ ಸಂಚಾರ ನಿರ್ಬಂಧವಿದೆ. ಪ್ರವಾಸಿಗರನ್ನು ಬ್ಯಾಟರಿಚಾಲಿತ ವಾಹನದಲ್ಲಿ ಕೊಂಡೊಯ್ಯಲಾಗುತ್ತದೆ. ಆದರೆ, ಭಾನುವಾರ ನಿಯಮ ಮೀರಿ ವಾಹನಗಳು ಸಂಚರಿಸಿದವು. ಯೋಗ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಹಾಗೂ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗಿದ್ದ ಬಸ್ ಗಳು ಬೇಕಾಬಿಟ್ಟಿ ಸಂಚರಿಸಿದವು. ವಾಹನಗಳ ಹೊಗೆಯಿಂದ ಸ್ಮಾರಕಗಳು ಕಳೆಗುಂದಬಾರದು ಎಂಬ ಕಾರಣಕ್ಕಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ವಾಹನಗಳ ಸಂಚಾರದ ಮೇಲೆ ನಿರ್ಬಂಧ ಹೇರಿದೆ.

ನಿಯಮ ಮೀರಿ ಹಂಪಿಯ ನಿರ್ಬಂಧಿತ ಪ್ರದೇಶದಲ್ಲಿ ಸಂಚರಿಸಿದ ವಾಹನಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.