ADVERTISEMENT

ಸೆ. 9ರಿಂದ ಅಂಗನವಾಡಿ ನೌಕರರ ರಾಜ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 13:30 IST
Last Updated 3 ಸೆಪ್ಟೆಂಬರ್ 2022, 13:30 IST
   

ಹೊಸಪೇಟೆ (ವಿಜಯನಗರ): ‘ಅಂಗನವಾಡಿ ನೌಕರರ 8ನೇ ರಾಜ್ಯ ಸಮ್ಮೇಳನ ಸೆ. 9ರಿಂದ 11ರ ವರೆಗೆ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಅಂಗನವಾಡಿ ನೌಕರರ ಸಂಘದ (ಸಿ.ಐ.ಟಿ.ಯು ಬೆಂಬಲಿತ) ಜಿಲ್ಲಾ ಅಧ್ಯಕ್ಷೆ ಕೆ. ನಾಗರತ್ನಮ್ಮ ತಿಳಿಸಿದರು.

ರಾಜ್ಯದ ವಿವಿಧ ಭಾಗಗಳಿಂದ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳುವರು. ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಂಧು, ರಾಜ್ಯದ ನಾಯಕಿ ವರಲಕ್ಷ್ಮಿ ಸೇರಿದಂತೆ ಅನೇಕ ಜನ ಕಾರ್ಮಿಕ ಮುಖಂಡರು ಪಾಲ್ಗೊಳ್ಳುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಸೆ. 9ರಂದು ಬೆಳಿಗ್ಗೆ 10ಕ್ಕೆ ಮೆರವಣಿಗೆ ನಡೆಯಲಿದೆ. 11ಕ್ಕೆ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಬಹಿರಂಗ ಸಭೆ ಜರುಗಲಿದೆ. ಕೇಂದ್ರ, ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿ ಬಗ್ಗೆ ಚರ್ಚಿಸಲಾಗುವುದು. ಐ.ಸಿ.ಡಿ.ಎಸ್‌. ಯೋಜನೆಗೆ ಕಡಿತಗೊಳಿಸಿರುವ ಅನುದಾನದ ಬಗ್ಗೆ ಖಂಡನಾ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.

ADVERTISEMENT

ಅಂಗನವಾಡಿ ನೌಕರರ ಸೇವೆ ಕಾಯಂಗೊಳಿಸುವವರೆಗೆ ಕನಿಷ್ಠ ಮಾಸಿಕ ₹21 ಸಾವಿರ ವೇತನ ನಿಗದಿಪಡಿಸಬೇಕೆಂದು ಹೇಳಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಅಂಗನವಾಡಿಗಳನ್ನು ಸಹ ಖಾಸಗೀಕರಣಗೊಳಿಸುವ ಹುನ್ನಾರ ನಡೆಸಲಾಗುತ್ತಿದೆ. ಇದರ ವಿರುದ್ಧ ತಿಳಿವಳಿಕೆ ನಡೆಸಿ, ಬೃಹತ್‌ ಹೋರಾಟ ರೂಪಿಸಲಾಗುವುದು ಎಂದರು.

ಸಿಐಟಿಯು ಜಿಲ್ಲಾ ಅಧ್ಯಕ್ಷ ಆರ್‌. ಭಾಸ್ಕರ್‌ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ. ಸತ್ಯಬಾಬು, ಮುಖಂಡರಾದ ಆರ್‌.ಎಸ್‌. ಬಸವರಾಜ, ಮರಡಿ ಜಂಬಯ್ಯ ನಾಯಕ, ಗೋಪಾಲ, ಜಯಪ್ರಕಾಶ್‌, ಶಕುಂತಲಮ್ಮ, ಸ್ವಪ್ನಾ, ಸುನೀತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.