ADVERTISEMENT

ಆಶಾ ಕಾರ್ಯಕರ್ತೆಯರಿಂದ ಧರಣಿ- ಸಮೀಕ್ಷೆ ಕಾರ್ಯಕ್ಕೆ ಒತ್ತಾಯಿಸದಂತೆ ಹಕ್ಕೊತ್ತಾಯ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 11:07 IST
Last Updated 3 ಸೆಪ್ಟೆಂಬರ್ 2021, 11:07 IST
ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದವರು ಶುಕ್ರವಾರ ಹೊಸಪೇಟೆಯ ತಾಲ್ಲೂಕು ಆರೋಗ್ಯ ಅಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದವರು ಶುಕ್ರವಾರ ಹೊಸಪೇಟೆಯ ತಾಲ್ಲೂಕು ಆರೋಗ್ಯ ಅಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಹೊಸಪೇಟೆ(ವಿಜಯನಗರ): ಆರೋಗ್ಯ ಇಲಾಖೆಯ ಇ-ಸಂಜೀವಿನಿ ಸೇರಿದಂತೆ ಇತರೆ ಸಮೀಕ್ಷೆ ಕಾರ್ಯ ಕೈಗೊಳ್ಳುವಂತೆ ಒತ್ತಡ ಹೇರಬಾರದು ಎಂದು ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದವರು ಶುಕ್ರವಾರ ನಗರದಲ್ಲಿ ಧರಣಿ ನಡೆಸಿದರು.

ನಗರದ ತಾಲ್ಲೂಕು ಆರೋಗ್ಯ ಅಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತೆಯರು ಬಳಿಕ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಭಾಸ್ಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಆರ್‌ಸಿಎಚ್ ಪೋರ್ಟಲ್ ಮೂಲಕ ನಡೆಸುವ ಎಎನ್‌ಸಿ ಮತ್ತು ಪಿಎನ್‌ಸಿ ಡಾಟಾ ಕೆಲಸಗಳು ದಾಖಲಾಗದೆ ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ ಸಿಗುತ್ತಿಲ್ಲ. ಇಲಾಖೆಯ ಆದೇಶದಂತೆ ಇ-ಸಂಜೀವಿನಿ, ಎನ್‌ಸಿಡಿ ಸಮೀಕ್ಷೆ ಕಾರ್ಯದ ಮಾಹಿತಿಯನ್ನು ಮಾತ್ರ ಸಾರ್ವಜನಿಕರಿಗೆ ತಿಳಿಸುವ ಕಾರ್ಯ ಆಶಾ ಕಾರ್ಯಕರ್ತೆಯರದ್ದು, ಅದರ ಬದಲಾಗಿ ಒತ್ತಾಯಪೂರ್ವಕವಾಗಿ ಅವರಿಂದಲೇ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ. ಈ ಕುರಿತು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ತಾಲ್ಲೂಕಿನ ಹಲವು ನಗರ ಆರೋಗ್ಯ ಕೇಂದ್ರಗಳಲ್ಲಿ ವೇತನ ನೀಡದೆ ಫೆಲಿಸಿಟೇಟರ್ ಎಂದು ಕೆಲಸ ಮಾಡಿಸಲಾಗುತ್ತಿದ್ದು, ಖಾಲಿ ಇರುವ ಪೆಲಿಸಿಟೇಟರ್ ಹುದ್ದೆ ಭರ್ತಿ ಮಾಡಬೇಕು. ಕಫ ಪರೀಕ್ಷೆ ಮಾದರಿಯನ್ನು ತರುವಂತೆ ಆಶಾ ಕಾರ್ಯಕರ್ತೆಯರಿಗೆ ಒತ್ತಾಯಿಸಲಾಗುತ್ತಿದೆ. ಸುತ್ತೋಲೆಯಲ್ಲಿ ಇರದ ಕೆಲಸವನ್ನು ಆಶಾಗಳಿಂದ ಮಾಡಿಸಲಾಗುತ್ತಿದೆ ಎಂದು ಆರೋಪಿಸಿದರು.

ತಾಲ್ಲೂಕು ಸಂಘಟನೆಯ ಸಲಹೆಗಾರ ಡಾ.ಎನ್.ಪ್ರಮೋದ್, ಅಧ್ಯಕ್ಷೆ ನೇತ್ರಾವತಿ, ಕಾರ್ಯದರ್ಶಿ ಅನ್ನಪೂರ್ಣ, ನಗರ ಅಧ್ಯಕ್ಷೆ ರುಕ್ಮಿಣಿ ಸೇರಿದಂತೆ ನಗರ ಮತ್ತು ಗ್ರಾಮೀಣ ಭಾಗದ ಆಶಾ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.