ADVERTISEMENT

ಪ್ರಯಾಣಿಕರ ಲ್ಯಾಪ್‌ಟಾಪ್‌ ಹಿಂತಿರುಗಿಸಿ ಪ್ರಾಮಾಣಿಕತೆ ತೋರಿದ ಆಟೊ ಚಾಲಕ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 15:45 IST
Last Updated 5 ಏಪ್ರಿಲ್ 2021, 15:45 IST
ಹೊಸಪೇಟೆಯ ಪಟ್ಟಣ ಠಾಣೆಯಲ್ಲಿ ಸೋಮವಾರ ಸಂಜೆ ಆಟೊ ಚಾಲಕ ಹೊನ್ನೂರಪ್ಪ ಅವರು ಎನ್‌. ಚಮಂತಿ ಅವರಿಗೆ ಲ್ಯಾಪ್‌ಟಾಪ್‌, ಅದರ ಬ್ಯಾಗ್‌ ಹಿಂತಿರುಗಿಸಿದರು
ಹೊಸಪೇಟೆಯ ಪಟ್ಟಣ ಠಾಣೆಯಲ್ಲಿ ಸೋಮವಾರ ಸಂಜೆ ಆಟೊ ಚಾಲಕ ಹೊನ್ನೂರಪ್ಪ ಅವರು ಎನ್‌. ಚಮಂತಿ ಅವರಿಗೆ ಲ್ಯಾಪ್‌ಟಾಪ್‌, ಅದರ ಬ್ಯಾಗ್‌ ಹಿಂತಿರುಗಿಸಿದರು   

ಹೊಸಪೇಟೆ (ವಿಜಯನಗರ): ಪ್ರಯಾಣಿಕರೊಬ್ಬರು ಮರೆತು ಬಿಟ್ಟು ಹೋಗಿದ್ದ ₹25,000 ಮೌಲ್ಯದ ಲ್ಯಾಪ್‌ಟಾಪ್‌ ಅನ್ನು ಆಟೊ ಚಾಲಕರೊಬ್ಬರು ಅವರಿಗೆ ತಲುಪಿಸಿ ಪ್ರಾಮಾಣಿಕತೆ ತೋರಿದ್ದಾರೆ.

ನಗರದ ರಾಣಿಪೇಟೆಯ ನಿವಾಸಿ, ಆಟೊ ಚಾಲಕ ಹೊನ್ನೂರಪ್ಪ ಅವರೇ ಪ್ರಾಮಾಣಿಕತೆ ಮೆರೆದು, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕೆಎಲ್‌ಎಸ್‌ ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲರಾದ ಎನ್‌. ಚಮಂತಿ ಅವರು ಸಂಕ್ಲಾಪುರದಿಂದ ಹೊನ್ನೂರಪ್ಪ ಅವರ ಆಟೊದಲ್ಲಿ ಬರುವಾಗ ಮರೆತು ಲ್ಯಾಪ್‌ಟಾಪ್‌ ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಬಳಿಕ ಲ್ಯಾಪ್‌ಟಾಪ್‌ ಕಳೆದು ಹೋದುದರ ಬಗ್ಗೆ ಪಟ್ಟಣ ಠಾಣೆಗೆ ಹೋಗಿ ದೂರು ಸಲ್ಲಿಸಿದ್ದಾರೆ. ಹೊನ್ನೂರಪ್ಪ ಅವರು ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗಿದಾಗ ಆಟೊದಲ್ಲಿ ಲ್ಯಾಪ್‌ಟಾಪ್‌ ಇರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಅವರ ಮಗ ಮನೋಹರ್‌ ಜತೆಗೂಡಿ ಠಾಣೆಗೆ ಬಂದಿದ್ದಾರೆ. ನಂತರ ಪೊಲೀಸರು ಚಮಂತಿ ಅವರನ್ನು ಕರೆಸಿ, ಹೊನ್ನೂರಪ್ಪ ಅವರಿಂದಲೇ ಸೋಮವಾರ ಲ್ಯಾಪ್‌ಟಾಪ್‌, ಅದರ ಬ್ಯಾಗ್‌ ಹಿಂತಿರುಗಿಸಿದ್ದಾರೆ.

ಹೊನ್ನೂರಪ್ಪ ಅವರ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಪಟ್ಟಣ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಮೇಟಿ ಶ್ರೀನಿವಾಸ ಅವರು, ಬಳಿಕ ಅವರಿಗೆ ಶಾಲು ಹೊದಿಸಿ, ಮಾಲೆ ಹಾಕಿ ಗೌರವಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.