
ಹೊಸಪೇಟೆ (ವಿಜಯನಗರ): ನೆಹರೂ ಕಾಲೊನಿಯಲ್ಲಿರುವ ನಗರದ ಏಕೈಕ ಅಯ್ಯಪ್ಪ ಸ್ವಾಮಿ ದೇವಸ್ಥಾನದ ದ್ರವ್ಯಕಲಶ ಮತ್ತು ಕುಂಭಾಭಿಷೇಕ ಶನಿವಾರ ನಡೆದಿದ್ದು, ನೂರಾರು ಮಂದಿ ಸ್ವಾಮಿಯ ಶಿಖರಕ್ಕೆ ಕಲಶಾಭಿಷೇಕ ಮಾಡುವ ಮೂಲಕ ಭಕ್ತಿ ಸಮರ್ಪಿಸಿದರು.
ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ದೇವಸ್ಥಾನದಲ್ಲಿ ಬ್ರಹ್ಮಕಲಶ ಆಗಬೇಕು ಎಂಬ ಸೂಚನೆಯಂತೆ ಡಿ.21ರಿಂದಲೇ ಇಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದವು. ಡಿ.23ರಂದು ಮಾಂಗಲ್ಯ ಪೂಜೆ, ಸ್ವಯಂವರ ಹೋಮ, 24ರಂದು ಸರ್ಪಬಲಿ ಸೇವೆ, ಆಶ್ಲೇಷ ಬಲಿ, 25ರಂದು ಭಗವತೀ ಸೇವೆ ನಡೆದಿತ್ತು.
ಶನಿವಾರ ದೇವಸ್ಥಾನದದಲ್ಲಿ ವರ್ಷಂಪ್ರತಿ ನಡೆಯುವಂತೆ ಮಂಡಲ ಪೂಜೆಯೂ ನಡೆಯಿತು. ಅದೇ ಸಂದರ್ಭದಲ್ಲಿ ದ್ರವ್ಯಕಲಶ ಮತ್ತು ಕುಂಭಾಭಿಷೇಕ ನಡೆಯುವ ಮೂಲಕ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು. ಸಂಜೆ ಪಟೇಲ್‌ನಗರದ ಗೋಪಾಲಕೃಷ್ಣ ದೇವಸ್ಥಾನದಿಂದ ಅಯ್ಯಪ್ಪ ಗುಡಿಯವರೆಗೆ ಅಯ್ಯಪ್ಪ ಸ್ವಾಮಿಯ ಶೋಭಾಯಾತ್ರೆ ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಇ.ಎನ್.ಶಂಕರನ್ ನಂಬೂದಿರಿ ಅವರ ನೇತೃತ್ವದಲ್ಲಿ ಎಲ್ಲ ಧಾರ್ಮಿಕ ವಿಧಿವಿಧಾನಗಳು ನಡೆದವು. ಸಾವಿರಾರು ಮಂದಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಅಯ್ಯಪ್ಪಸ್ವಾಮಿ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಜನಾರ್ದನ ರೆಡ್ಡಿ, ಉಪಾಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಭೂಪಾಳ್ ಪ್ರಹ್ಲಾದ್, ಖಜಾಂಚಿ ರವೀಂದ್ರನಾಥ ಗುಪ್ತ, ಸದಸ್ಯರಾದ ರಾಜೇಶ್, ಬರಡೆ ನಾರಾಯಣ, ಶಿವಪ್ರಸಾದ್, ಗಣೇಶ್ ಹಾಗೂ ಅನೇಕ ಮಂದಿ ದಾನಿಗಳು ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.