
ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ತಂಬ್ರಹಳ್ಳಿಯ ಐತಿಹಾಸಿಕ ಬಂಡೆ ರಂಗನಾಥೇಶ್ವರ ಸ್ವಾಮಿ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ರಥೋತ್ಸವ ಹಿನ್ನೆಲೆಯಲ್ಲಿ ಇಲ್ಲಿನ ಬಂಡೆಯಲ್ಲಿ ಒಡಮೂಡಿದ ರಂಗನಾಥೇಶ್ವರ ಸ್ವಾಮಿಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಚಿನ್ನ ಮತ್ತು ಬೆಳ್ಳಿ ಆಭರಣಗಳಲ್ಲಿ ಅಲಂಕರಿಸಿದ್ದ ರಂಗನಾಥಸ್ವಾಮಿ ಮತ್ತು ಲಕ್ಷ್ಮೀದೇವಿ ಮೂರ್ತಿಗೆ ಕುಂಕುಮಾರ್ಚನೆ ಮಾಡಲಾಯಿತು.
ದೇವರ ವಿವಿಧ ನಾಮಾವಳಿಗಳ ಪಠಣ ನಡೆಯಿತು. ಬೆಳಗಿನ ಜಾವದಿಂದಲೇ ನೂರಾರು ಭಕ್ತರು ದೇವರ ದರ್ಶನ ಪಡೆದರು. ಸಂಜೆ ವಿಶೇಷ ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಬಂಡೇ ರಂಗನಾಥ ಸ್ವಾಮಿ ಉತ್ಸವ ಮೂರ್ತಿಯನ್ನು ವಿವಿಧ ವಾದ್ಯಗೋಷ್ಠಿಗಳೊಂದಿಗೆ ಗುಡ್ಡದ ಮೇಲಿನಿಂದ ಮೆರವಣಿಗೆ ಮೂಲಕ ಕರೆತರಲಾಯಿತು.
ರಥದ ಸುತ್ತಲೂ ಪ್ರದಕ್ಷಿ ಣೆ ಹಾಕಿದ ಬಳಿಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ರಥ ಮುಂದಕ್ಕೆ ಚಲಿಸುತ್ತಿದ್ದಂತೆಯೇ ಭಕ್ತರ ಹಷೋದ್ಘಾರ ಮುಗಿಲುಮುಟ್ಟಿತ್ತು, ರಥಕ್ಕೆ ಬಾಳೆ ಹಣ್ಣು ಎಸೆದು ಹರಕೆ ತೀರಿಸಿದರು. ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ರಥದ ಮೂಲ ಸ್ಥಾನಕ್ಕೆ ಬರುವವರೆಗೂ ನೆರೆದಿದ್ದ ಭಕ್ತರು ಗೋವಿಂದ ನಾಮಾವಳಿಗಳನ್ನು ಪಠಿಸಿದರು.
ರಥೋತ್ಸವದ ಹಿನ್ನೆಲೆಯಲ್ಲಿ ಕಳೆದ ಏಳು ದಿನಗಳಿಂದ ದೇವಸ್ಥಾನದಲ್ಲಿ ಪ್ರತಿದಿನ ವಿಶೇಷ ಪೂಜೆಗಳು ನಡೆದವು. ದೇವರ ಪಟಾಕಿಯನ್ನು ಹರಾಜಿನಲ್ಲಿ ಕೊಪ್ಪಳದ ರಂಗಪ್ಪ ಪೂಜಾರ ಅವರು ₹3,01,101ಕ್ಕೆ ಪಡೆದರು.
ಹಿನ್ನೆಲೆ: ತುಂಗಭದ್ರಾ ಹಿನ್ನೀರು ಪ್ರದೇಶದ ಪಕ್ಕದ ಬಂಡೆಯಲ್ಲಿ ಒಡಮೂಡಿರುವ ತಾಲ್ಲೂಕಿನ ತಂಬ್ರಹಳ್ಳಿಯ ಬಂಡೆ ರಂಗನಾಥ ಸ್ವಾಮಿ. ಈ ದೇವಾಸ್ಥಾನದ ನಿರ್ಮಾಣಕ್ಕೆ ತನ್ನದೇ ಆದ ಇತಿಹಾಸವಿದೆ. 17ನೇ ಶತಮಾನದ ಮೈಸೂರು ಅರಸರ ಕಾಲದಲ್ಲಿ ಹರಪನಹಳ್ಳಿ ಪಾಳೇಗಾರರಾದ ಸೋಮಶೇಖರ ನಾಯಕರ ಸಾಮಂತನಾಗಿದ್ದ ದಂಡನಾಯಕ ಓಬಳನಾಯಕ ದೇವಾಸ್ಥಾನವನ್ನು ನಿರ್ಮಿಸಿದನೆಂದು ಇತಿಹಾಸ ಹೇಳುತ್ತದೆ.
ಬೆಟ್ಟದ ತುದಿಯಲ್ಲಿ ರಂಗನಾಥೇಶ್ವರ ಮತ್ತು ಲಕ್ಷ್ಮಿ ದೇವಸ್ಥಾನಗಳನ್ನು ನಿರ್ಮಿಸಿದ್ದಲ್ಲದೇ ಬಿರುಬೇಸಿಗೆಯಲ್ಲೂ ತಂಗಾಳಿ ಸೂಸುವ ಮಂಟಪವನ್ನು ನಿರ್ಮಾಣಮಾಡಿದ್ದನೆಂದು ಹೊಂಡದ ಬಳಿ ಇರುವ ಶಾಸನಗಳು ರುಜುವಾತು ಪಡಿಸುತ್ತವೆ. ಇದನ್ನು ವೀಕ್ಷಣಾ ಗೋಪುರವೆಂತಲೂ ಕರೆಯಲಾಗುತ್ತದೆ. ಬೆಟ್ಟದ ಕೆಳಗೆ ನಿರ್ಮಾಣಗೊಂಡಿರುವ ಬಾವಿಗೂ ಕೂಡ ಓಬಳನಾಯಕ ಬಾವಿ ಎಂದು ಹೇಳಲಾಗುತ್ತಿದೆ. ಈ ತಂಗಾಳಿ ಗೋಪುರದ ನಾಲ್ಕುದಿಕ್ಕಿಗೂ ಬಾಲಕೃಷ್ಣ, ಉಗ್ರನರಸಿಂಹ, ವರಹಾಸ್ವಾಮಿ ಮೂರ್ತಿಗಳನ್ನು ಕೆತ್ತಲ್ಪಟ್ಟಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.