ಹೊಸಪೇಟೆ (ವಿಜಯನಗರ): ಒಳಮೀಸಲಾತಿ ಜಾರಿ ವಿರೋಧಿಸಿ ನಗರದಲ್ಲಿ ಇದೇ 20ರಂದು ನಡೆದಿದ್ದ ಪ್ರತಿಭಟನೆ ವೇಳೆ ಮೂವರ ವಿರುದ್ಧ ದಾಖಲಿಸಿದ ಪ್ರಕರಣ ತಕ್ಷಣ ಹಿಂದೆಗೆದುಕೊಳ್ಳಬೇಕು ಅಥವಾ ಪ್ರಕರಣ ದಾಖಲಿಸಲು ಕಾರಣರಾದ ಪೊಲೀಸ್ ಅಧಿಕಾರಿಗಳನ್ನು ವಾರದೊಳಗೆ ಅಮಾನತುಗೊಳಿಸಬೇಕು ಎಂದು ಬಂಜಾರ ಸಮುದಾಯದವರು ಗಡುವು ನೀಡಿದ್ದಾರೆ.
‘ಡಿವೈಎಸ್‌ಪಿ, ಸಿಪಿಐ ಮತ್ತು ಪಿಎಸ್ಐ ಅವರನ್ನು ವಾರದೊಳಗೆ ಅಮಾನತುಗೊಳಿಸದಿದ್ದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಧರಣಿ ನಡೆಸುವುದು ನಿಶ್ಚಿತ’ ಎಂದು ಮೀಸಲಾತಿ ಹಕ್ಕು ಸಂರಕ್ಷಣಾ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಾಂತ ಅಂಗಡಿ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
‘ಒಳಮೀಸಲಾತಿ ಜಾರಿಗೊಳಿಸಿದ ಕ್ರಮವೇ ಸರಿ ಇಲ್ಲ. ಬಲಗೈ ಸಮುದಾಯಗಳ ಬೆದರಿಕೆಗೆ ತಕ್ಷಣ ಸ್ಪಂದಿಸಿದ ಸರ್ಕಾರ ಶೇ 1ರಷ್ಟು ಮೀಸಲಾತಿ ಹೆಚ್ಚಿಸಿತು. ಆದರೆ ಬಂಜಾರ, ಭೋವಿ,ಕೊರಚ, ಕೊರಮ ಸಮುದಾಯಗಳಿಗೆ ಕನಿಷ್ಠ ಶೇ 4.5 ಮೀಸಲಾತಿ ನಿಗದಿಪಡಿಸಬೇಕೆಂಬ ಬೇಡಿಕೆ ತಿರಸ್ಕರಿಸಿ, ಇತರ ಅಲೆಮಾರಿ ಸಮುದಾಯಗಳನ್ನು ಸೇರಿಸಿಕೊಂಡು ಶೇ 5ರಷ್ಟು ಮೀಸಲಾತಿ ನಿಗದಿಮಾಡಿದೆ, ಮೇಲಾಗಿ ಸಾಮಾನ್ಯ ಕೆಟಗರಿಯಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇಲ್ಲದಂತೆ ಮಾಡಲಾಗಿದೆ. ಇದು ನಮಗೆ ಮಾಡಲಾದ ಘೋರ ಅನ್ಯಾಯ. ಇದನ್ನು ವಿರೋಧಿಸಿ ನಾವು ಶಾಂತಿಯುತ ಪ್ರತಿಭಟನೆ ನಡೆಸಿದ್ದೇವೆ. ಇಷ್ಟಕ್ಕೇ ಪ್ರಕರಣ ದಾಖಲಿಸಲಾಗಿದೆ’ ಎಂದು ಅವರು ಅರೋಪಿಸಿದರು.
’ಅರೆಬೆತ್ತಲೆ ಪ್ರತಿಭಟನೆ ನಡೆಸಲು ಮೊದಲೇ ಅನುಮತಿ ಪಡೆಯಬೇಕಿಲ್ಲ, ಪ್ರತಿಭಟನೆ ವೇಳೆ ನಾವು ನಮ್ಮ ತಲೆ ಬೋಳು ಮಾಡಿಕೊಂಡಿದ್ದೇವೆಯೇ ಹೊರತು ಬೇರೆಯವರದ್ದಲ್ಲ. ಸರ್ಕಾರದ ವಿರುದ್ಧ ಧಿಕ್ಕಾರ ಕೂಗುವುದು ನಮ್ಮ ಹಕ್ಕು. ಇಷ್ಟಕ್ಕೆ ಪ್ರಕರಣ ದಾಖಲಿಸುವುದು ಎಂದರೆ ನಮ್ಮನ್ನು ಬೆದರಿಸುವ ತಂತ್ರವಲ್ಲದೆ ಬೇರೇನಲ್ಲ. ಇದಕ್ಕೆ ನಾವು ಅಂಜುವುದಿಲ್ಲ’ ಎಂದು ಅವರು ಹೇಳಿದರು.
ಸಂಡೂರು ಸೇವಾಲಾಲ್ ಗುರುಪೀಠದ ತಿಪ್ಪೇಸ್ವಾಮಿ ಮಹಾರಾಜ್ ಮಾತನಾಡಿ, ನಮಗೆ ಅನ್ಯಾಯ ಆಗಿದೆ ಎಂಬ ಕಾರಣಕ್ಕೆ ನಾವು 20ರಂದು ಪ್ರತಿಭಟನೆ ನಡೆಸಿದ್ದೇವೆ. ನಮ್ಮ ಸಮಾಜದ ಒಳಿತಿಗಾಗಿ ದೇಹ ತ್ಯಾಗಕ್ಕೂ ಸಿದ್ಧ ಎಂದರು.
ಮುಖಂಡರಾದ ಲಿಂಗಾ ನಾಯ್ಕ್, ಹನುಮ ನಾಯ್ಕ್, ಶಿವಕುಮಾರ್, ಅಲೋಕ್ ನಾಯ್ಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.