ಹೊಸಪೇಟೆ (ವಿಜಯನಗರ): ‘ಭಜನೆ ಮಾಡುತ್ತಲೇ ಇದ್ದರೆ ಏನೂ ಸಾಧಿಸಲು ಸಾಧ್ಯವಿಲ್ಲ, ಕಾಯಕವೇ ಪೂಜೆಯಾದರೆ ಮಾತ್ರ ನಾವು ಉದ್ಧಾರ ಅಗಲು ಸಾಧ್ಯ’ ಎಂದು ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘದ ರಾಜ್ಯ ಅಧ್ಯಕ್ಷೆ ಬಿ.ಟಿ.ಲಲಿತಾ ನಾಯ್ಕ್ ಹೇಳಿದರು.
ಗುರುವಾರ ಇಲ್ಲಿ ನಡೆದ ಶ್ರೀ ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತ್ಯುತ್ಸವ ಹಾಗೂ ಬಂಜಾರ (ಲಂಬಾಣಿ) ಸಮಾಜದ ಜಾಗೃತಿ ಸಮಾವೇಶ ಉದ್ಘಾಟಿಸಿದ ಅವರು, ‘ನಾವೆಲ್ಲ ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನದ ಮೇಲೆ ನಂಬಿಕೆ ಇಟ್ಟವರು. ಅವರು ತೋರಿಸಿಕೊಟ್ಟ ಹಾದಿಯಲ್ಲಿ ನಡೆದರೆ ಯಶಸ್ಸು ನಿಶ್ಚಿತ’ ಎಂದರು.
ಶಾಸಕ ಎಚ್.ಆರ್.ಗವಿಯಪ್ಪ ಅವರು ಸಮಾವೇಶಕ್ಕೆ ಗೈರಾಗಿದ್ದನ್ನು ಪರೋಕ್ಷವಾಗಿ ಟೀಕಿಸಿದ ಅವರು, ‘ಶಾಸಕರು ಜನಸೇವಕರು ಎಂಬುದನ್ನು ಮರೆಯಬಾರದು. ಅವರು ತಾವೇ ರಾಜರೆಂದು ಭಾವಿಸಿದ್ದೇ ಆದರೆ ಅವರಿಗೆ ಧಿಕ್ಕಾರ, ನಮ್ಮ ಪರವಾಗಿ ಸರ್ಕಾರದಲ್ಲಿ ಕೆಲಸ ಮಾಡಬೇಕು ಎಂಬುದಕ್ಕೇ ಅವರನ್ನು ಆರಿಸಲಾಗಿದೆ. ನಾವು ಸರಿಯಾಗಿದ್ದರೆ ಅವರೂ ಸರಿಹೋಗುತ್ತಾರೆ’ ಎಂದು ಮಾರ್ಮಿಕವಾಗಿ ನುಡಿದರು.
ಎರಡೇ ಜಾತಿ: ‘ಮನುಷ್ಯರಲ್ಲಿ ಇರುವುದು ಎರಡೇ ಜಾತಿ, ಅದು ಗಂಡು–ಹೆಣ್ಣು. ನಾನು ಯುವತಿಯಾಗಿದ್ದಾಗ ನಮ್ಮ ತಾಂಡಾದ ಯುವತಿಯೊಬ್ಬಳು ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾದಳು. ಆಗ ಅವರಿಗೆ ಹೊಡೆದು, ಬಹಿಷ್ಕಾರ ಹಾಕಬೇಕೆಂಬ ಒತ್ತಡ ಬಂದಿತ್ತು. ನನ್ನ ಅಪ್ಪ ಆಗ ಸಮಾಜದ ಮುಖಂಡರಾಗಿದ್ದರು. ನೀವಿಬ್ಬರೂ ಹೋಗಿ ಎಲ್ಲಾದರೂ ಸುಖವಾಗಿರಿ ಎಂದು ಹೇಳಿ ಕಳುಹಿಸಿದರು. ಇಂದು ಅದೇ ದಂಪತಿಯ ಮಗ ಐಎಎಸ್ ಅಧಿಕಾರಿ’ ಎಂದು ಲಲಿತಾ ನಾಯ್ಕ ಹೇಳಿದರು.
ಕೊಟ್ಟೂರು ಬಂಜಾರ ಶಕ್ತಿಪೀಠದ ಶಿವಪ್ರಕಾಶ್ ಮಹಾರಾಜ್, ರಾರಾಳ ತಾಂಡಾ ರಾಮಕೃಷ್ಣ ಆಶ್ರಮದ ವಿಷ್ಣುಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿದ್ದರು. ಮಧು ನಾಯ್ಕ್ ಲಂಬಾಣಿ ದಿಕ್ಸೂಚಿ ಭಾಷಣ ಮಾಡಿದರು.
ಬಂಜಾರ ಸೇವಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಲಾಲ್ಯ ನಾಯ್ಕ, ಡಿ.ವೆಂಕಟರಮಣ ಮಾತನಾಡಿದರು. ಎಲ್.ಹಾಲ್ಯಾ ನಾಯ್ಕ, ವಾಲ್ಯ ನಾಯ್ಕ, ಟಿ.ರಾಮನಯ್ಕ, ಸಮಾಜದ ಗಣ್ಯರು ವೇದಿಕೆಯಲ್ಲಿದ್ದರು.
ಆಕರ್ಷಕ ಮೆರವಣಿಗೆ: ಕಾರ್ಯಕ್ರಮಕ್ಕೆ ಮೊದಲು ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆ ವಡಕರಾಯ ದೇವಸ್ಥಾನದ ಬಳಿಯಿಂದ ಒಳಾಂಗಣ ಕ್ರೀಡಾಂಗಣದ ತನಕ ನಡೆಯಿತು. ಬಂಜಾರ ಸೇವಾ ಸಂಘದ ಜತೆಗೆ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಸಹಯೋಗ ನೀಡಿದ್ದವು.
‘ಪಾಕಿಸ್ತಾನ ಜಿಂದಾಬಾದ್’ ಮಾಧ್ಯಮ ಸೃಷ್ಟಿ
‘ವಿಧಾನಸೌಧದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಲಾಗಿದೆ ಎಂಬುದು ಮಾಧ್ಯಮ ಸೃಷ್ಟಿ. ಇದೆಲ್ಲ ಮನುಷ್ಯನ ಸಣ್ಣತನದ ಲಕ್ಷಣ. ಪ್ರತಿಯೊಬ್ಬ ಮನುಷ್ಯನಲ್ಲೂ ಮೃಗತ್ವ ಇದೆ ಅದನ್ನು ಮೆಟ್ಟಿ ನಿಂತಾಗ ಜಗತ್ತು ಸುಂದರವಾಗಿ ಕಾಣಿಸುತ್ತದೆ’ ಎಂದು ಲಲಿತಾ ನಾಯ್ಕ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.