ADVERTISEMENT

ಸ್ವಾತಂತ್ರ್ಯ ಸಂಗ್ರಾಮಕ್ಕೆ ಭಗವದ್ಗೀತೆ ಪ್ರೇರಣೆ: ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್

16 ಸಾವಿರ ಭಾಮಿನಿ ಷಟ್ಪದಿಯ ‘ಶ್ರೀಕೃಷ್ಣ ಲೀಲಾಮೃತ’ ಮಹಾಕಾವ್ಯ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 4:59 IST
Last Updated 29 ಡಿಸೆಂಬರ್ 2025, 4:59 IST
ಹೊಸಪೇಟೆಯಲ್ಲಿ ಭಾನುವಾರ ಶ್ರೀಕೃಷ್ಣ ಲೀಲಾಮೃತ ಮಹಾಕಾವ್ಯದ ಕುರಿತು ಮಾತನಾಡಿದ ಪ್ರವಚನಕಾರ ಪಾವಗಡ ಪ್ರಕಾಶರಾವ್ ಅವರನ್ನು ಸನ್ಮಾನಿಸಲಾಯಿತು  –ಪ್ರಜಾವಾಣಿ ಚಿತ್ರ
ಹೊಸಪೇಟೆಯಲ್ಲಿ ಭಾನುವಾರ ಶ್ರೀಕೃಷ್ಣ ಲೀಲಾಮೃತ ಮಹಾಕಾವ್ಯದ ಕುರಿತು ಮಾತನಾಡಿದ ಪ್ರವಚನಕಾರ ಪಾವಗಡ ಪ್ರಕಾಶರಾವ್ ಅವರನ್ನು ಸನ್ಮಾನಿಸಲಾಯಿತು  –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ‘ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಯೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಬೋಧನೆಯಾಗಿತ್ತು. ಇದು ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆಯಾಯಿತು’ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಹೇಳಿದರು.

ಗಮಕ ಕಲಾವಿದ, ನಿವೃತ್ತ ಹಿಂದಿ ಶಿಕ್ಷಕ ಕೃಷ್ಣಕವಿ ರಂಗೋಪಂತ ನಾಗರಾಜರಾಯರು ರಚಿಸಿರುವ 16,000 ಭಾಮಿನಿ ಷಟ್ಸದಿಯಲ್ಲಿರುವ ‘ಶ್ರೀಕೃಷ್ಣ ಲೀಲಾಮೃತ ಮಹಾಕಾವ್ಯಂ‘ ಅನ್ನು ಭಾನುವಾರ ಇಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಹೊಸಪೇಟೆಯ ಮಹಾಕವಿಯೊಬ್ಬರು ಕೃತಿ ರಚಿಸಿ 51 ವರ್ಷಗಳ ಬಳಿಕ ಅವರ ನಿಜವಾದ ಕಾವ್ಯಶಕ್ತಿ ಜಗತ್ತಿಗೆ ಗೊತ್ತಾಗಿದೆ. ಕುಮಾರವ್ಯಾಸನಿಗೆ ಹೋಲಿಸಿ ಹೇಳಬಹದಾದಂತಹ ಮಹಾಕವಿಯ ಕೃತಿ ಬಿಡುಗಡೆ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ನಾನು ಧನ್ಯ’ ಎಂದರು.

ADVERTISEMENT

‘ನಾಗರಾಜರಾಯರು ಅನನ್ಯ ಪ್ರತಿಭೆಯ ಕವಿ. ಮಹಾಭಾರತ ಮತ್ತು ಭಾಗವತವನ್ನು ಮಿಶ್ರಣಗೊಳಿಸಿ ಮಹಾಕಾವ್ಯ ರಚಿಸಿದವರಲ್ಲಿ ಅವರೇ ಮೊದಲಿಗರು. ಕೇವಲ ಕಾವ್ಯ ಬರೆಯದೆ, ಕೇವಲ ಶಾಸ್ತ್ರವನ್ನೂ ಬರೆಯದೆ ಎರಡನ್ನೂ ಸಮನ್ವಯಗೊಳಿಸಿದ್ದರಿಂದ ಈ ಕೃತಿ ಇನ್ನಷ್ಟು ಮಹತ್ವ ಪಡೆದಿದೆ’ ಎಂದು ತಿಳಿಸಿದರು.

ಕೃತಿ ಹೊರಬರಲು ಪ್ರಯತ್ನಿಸಿದ ಎತ್ನಳ್ಳಿ ಮಲ್ಲಯ್ಯ ಅವರ ಶ್ರಮವನ್ನೂ ಮಲ್ಲೇಪುರಂ ಕೊಂಡಾಡಿದರು.

ಅಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ರವೀಂದ್ರನಾಥ ಮಾತನಾಡಿ, ‘ನಾಗರಾಜರಾಯರು ಈ ಮಹಾಕಾವ್ಯ ಬರೆಯುವ ಮೂಲಕ ವಿಜಯನಗರ ಭಾರತ ಎಂಬುದಾಗಿ ಈ ಕೃತಿ ಮುಂದಿನ ದಿನಗಳಲ್ಲಿ ಖ್ಯಾತಿ ಗಳಿಸಲಿದೆ’ ಎಂದರು.

ಪಿವಿಎಸ್‌ಬಿಸಿ ಪ್ರೌಢಶಾಲೆಯ ಆಡಳಿತ ಮಂಡಳಿ ಸದಸ್ಯ ಪಿ.ಎನ್.ಶ್ರೀಪಾದ ಕಾರ್ಯಕ್ರಮ ಉದ್ಘಾಟಿಸಿದರು. ಬೆಂಗಳೂರಿನ ವಕೀಲ ಮಾಣಿಕ್ಯ ಪ್ರಭು ಮಾತನಾಡಿದರು. ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಮೃತ್ಯುಂಜಯ ರುಮಾಲೆ, ಅಧಿಕಾರಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಸಿದ್ದರಾಮ ಕಲ್ಮಠ, ನಾಗರಾಜ ಹವಾಲ್ದಾರ್,  ಎಲ್‌.ಡಿ.ಜೋಷಿ, ಶೇಖರಪ್ಪ ಹೊರಪೇಟೆ, ಗೊಗ್ಗ ಚನ್ನಬಸವರಾಜ, ಕೆ.ದಿವಾಕರ, ಮಧುರಚನ್ನ ಶಾಸ್ತ್ರಿ, ಪಿ.ವೆಂಕಟೇಶ್, ಪತ್ತಿಕೊಂಡ ಸಂತೋಷ್‌ನಾಗ್ ಇದ್ದರು.

ಬೆಳಿಗ್ಗೆ ನಗರದ ವಡಕರಾಯ ದೇವಸ್ಥಾನದಿಂದ ವೆಂಕಟೇಶ್ವರ ಕಲ್ಯಾಣ ಮಂಟಪದ ವರೆಗೆ ಮಹಾಕಾವ್ಯದ ಮಹಾಯಾನ ರೂಪದಲ್ಲಿ ಗ್ರಂಥಕರ್ತರ ಮೆರವಣಿಗೆ ನಡೆಯಿತು. 

ನಾನು ಐದೇ ವರ್ಷದಲ್ಲಿ ಈ ಕೃತಿ ರಚಿಸಿ ಮುಗಿಸಿದ್ದೆ. ಪ್ರಕಾಶನ ಮಾತ್ರ ಸಾಧ್ಯವಾಗಲಿಲ್ಲ. ಎತ್ನಳ್ಳಿ ಮಲ್ಲಯ್ಯ ಅವಿರತ ಶ್ರಮ ಹಾಕಿದ್ದರಿಂದಲೇ ನನ್ನ ಇಳಿಗಾಲದಲ್ಲಿ ಈ ಕೃತಿ ಹೊರಬರುವುದು ಸಾಧ್ಯವಾಯಿತು
–ರಂಗೋಪಂತ ನಾಗರಾಜರಾಯರು ಕೃತಿಕಾರ
ಭಾಮಿನಿ ಷಟ್ಪದಿಯಲ್ಲಿರುವ ಮಹಾಕಾವ್ಯಗಳ ಮೇಲೆ ಉಪನ್ಯಾಸ ನೀಡುವ ಗಮಕ ವಾಚನ ಮಾಡುವವರ ಸಂಖ್ಯೆ ಹೆಚ್ಚಬೇಕಾಗಿದೆ ಇಲ್ಲವಾದರೆ ಈ ಮಹಾಕಾವ್ಯ ಸಂಪ್ರದಾಯ ನಶಿಸಿ ಹೋಗುವ ಅಪಾಯ ಇದೆ
–ಪಾವಗಡ ಪ್ರಕಾಶ ರಾವ್ ಪ್ರವಚನಕಾರ

ಪುಸ್ತಕ ಪರಿಚಯ

ಕೃತಿಯ ಹೆಸರು: ಶ್ರೀಕೃಷ್ಣ ಲೀಲಾಮೃತ ಮಹಾಕಾವ್ಯಂ ಸಂಪುಟ 1 ಮತ್ತು 2

ಕೃತಿಕಾರರು: ಕೃಷ್ಣಕವಿ ರಂಗೋಪಂತ ನಾಗರಾಜರಾಯರು

ಸಂಪಾದನೆ: ಎತ್ನಳ್ಳಿ ಮಲ್ಲಯ್ಯ

ಪ್ರಕಾಶನ: ಎತ್ನಳ್ಳಿ ಪ್ರಕಾಶನ ಕಾರಿಗನೂರು

ಪುಟ: 1600 ಬೆಲೆ: ₹2400 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.