ಹೊಸಪೇಟೆ (ವಿಜಯನಗರ): ‘ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಬಾರದು. ಬೈಕ್ ಟ್ಯಾಕ್ಸಿಗಳಿಗೆ ಅವಕಾಶ ಕಲ್ಪಿಸಿದ್ದಲ್ಲಿ, ಆಟೊರಿಕ್ಷಾ ಚಾಲಕರು ಅತಂತ್ರರಾಗುತ್ತಾರೆ’ ಎಂದು ಕರ್ನಾಟಕ ಆಟೊರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟದ (ಎಫ್‌ಕೆಎಆರ್‌ಡಿಯು) ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಸಂತೋಷ್ ಕುಮಾರ್ ತಿಳಿಸಿದರು.
ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿರುವುದರ ವಿರುದ್ಧ ಹಂಪಿ ವಿರೂಪಾಕ್ಷೇಶ್ವರ ದೇವಾಲಯದ ಮುಂಭಾಗದಲ್ಲಿ ಗುರುವಾರ ಒಕ್ಕೂಟವು ಹಮ್ಮಿಕೊಂಡಿದ್ದ ಪ್ರತಿಭಟನೆ ಮತ್ತು ಮುಖ್ಯಮಂತ್ರಿ ಅವರಿಗೆ ಒಂದು ಲಕ್ಷ ಅಂಚೆ ಕಾರ್ಡ್ ರವಾನಿಸುವ ಚಳವಳಿಯಲ್ಲಿ ಮಾತನಾಡಿದ ಅವರು, ‘ನಮ್ಮ ಬೇಡಿಕೆಗಳನ್ನು ಈಡೇರಿಸಲು ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.
‘ಓಲಾ, ಉಬೆರ್, ರ‍್ಯಾಪಿಡೊ ನಮ್ಮ ಯಾತ್ರಿಯಂತಹ ಖಾಸಗಿ ಕಂಪನಿಗಳಿಗೆ ಕೇಂದ್ರ ಸರ್ಕಾರದ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ (2019) ಅನ್ವಯ ರಾಜ್ಯ ಸರ್ಕಾರ ಕರ್ನಾಟಕ ಮೋಟಾರ್ ವಾಹನ ಕಾಯ್ದೆಗೆ ತಿದ್ದುಪಡಿ ಮಾಡಿ ಈ ಕಂಪನಿಗಳಿಗೆ ಅಗ್ರಿಗೇಟರ್ ಪರವಾನಗಿ ನೀಡುವ ಹುನ್ನಾರ ನಡೆದಿದೆ’ ಎಂದು ಅವರು ಆರೋಪಿಸಿದರು.
ಒಕ್ಕೂಟದ ರಾಜ್ಯ ಸಮಿತಿ ಸದಸ್ಯ ಎಸ್.ಅನಂತಶಯನ, ಹಂಪಿ ಘಟಕದ ಅಧ್ಯಕ್ಷ ರಾಘವೇಂದ್ರ, ಕಾರ್ಯದರ್ಶಿ ವಿರೂಪಾಕ್ಷಿ , ಸಿಐಟಿಯು ಟ್ಯಾಕ್ಸಿ ಚಾಲಕರ ಸಂಘದ ಮುಖಂಡ ಚನ್ನಬಸವನಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.