ADVERTISEMENT

ಬಿಜೆಪಿಯವರು ದ್ವೇಷ ಭಕ್ತರು: ಕಾಂಗ್ರೆಸ್‌ನ ಹರಿಪ್ರಸಾದ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 10:27 IST
Last Updated 9 ಏಪ್ರಿಲ್ 2022, 10:27 IST
ಹರಿಪ್ರಸಾದ್‌
ಹರಿಪ್ರಸಾದ್‌   

ಹೊಸಪೇಟೆ (ವಿಜಯನಗರ): ‘ಬಿಜೆಪಿಯವರು ದೇಶಭಕ್ತರಲ್ಲ, ಅವರು ದ್ವೇಷ ಹರಡುವ ದ್ವೇಷ ಭಕ್ತರು’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಟೀಕಿಸಿದರು.

ಸರ್ಕಾರಕ್ಕೂ ಧರ್ಮಕ್ಕೂ ಸಂಬಂಧವಿಲ್ಲ. ಆದರೆ, ಧರ್ಮದ ಹೆಸರಿನಲ್ಲಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ಭಾವನಾತ್ಮಕ ವಿಷಯಗಳ ಮೂಲಕ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಆದರೆ, ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿ, ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಆದರೆ, ಸರ್ಕಾರ ಆ ಕೆಲಸ ಮಾಡುತ್ತಿಲ್ಲ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಕುಟುಕಿದರು.

ಹಿಂದೂಗಳ ಮತ ಬ್ಯಾಂಕ್‌ ಭದ್ರ ಪಡಿಸಿಕೊಳ್ಳಲು ಅಲ್ಪಸಂಖ್ಯಾತರ ವಿರುದ್ಧ ಜನರನ್ನು ಬಿಜೆಪಿ ಎತ್ತಿ ಕಟ್ಟುತ್ತಿದೆ. ಆದರೆ, ಈ ದೇಶದ ಹಿಂದೂಗಳು ಬಿಜೆಪಿಯನ್ನು ಎಂದೂ ಬೆಂಬಲಿಸಿಲ್ಲ. ಇಲ್ಲವಾದರೆ ಸತತವಾಗಿ ಬಿಜೆಪಿಯೇ ಅಧಿಕಾರಕ್ಕೆ ಬರುತ್ತಿತ್ತು. ರಾಜ್ಯದಲ್ಲಿ ಎರಡೂ ಸಲ ಆಪರೇಷನ್‌ ಕಮಲದ ಮೂಲಕವೇ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ ಎಂದು ಹೇಳಿದರು.

ADVERTISEMENT

ಡಬಲ್‌ ಎಂಜಿನ್‌ ಸರ್ಕಾರದಿಂದ ರಾಜ್ಯದ ಚಿತ್ರಣವೇ ಬದಲಾಗಲಿದೆ ಎಂದು ಬಿಜೆಪಿಯವರು ಹೇಳಿದ್ದರು. ಆದರೆ, ಶೇ 40ರಷ್ಟು ಕಮಿಷನ್‌ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದವರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಆರೋಪಿಸಿದ್ದಾರೆ. ಆದರೆ, ಅವರು ಮೌನ ವಹಿಸಿದ್ದಾರೆ. ಪರೋಕ್ಷವಾಗಿ ಭ್ರಷ್ಟಾಚಾರಕ್ಕೆ ಪ್ರಧಾನಿಯೇ ಕುಮ್ಮಕ್ಕು ಕೊಡುತ್ತಿದ್ದಾರೆ ಎನ್ನುವುದು ಇದರಿಂದ ಗೊತ್ತಾಗುತ್ತದೆ ಎಂದರು.

ಪೆಟ್ರೋಲ್‌, ಡೀಸೆಲ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ವಿದೇಶಾಂಗ ನೀತಿ ನೆಲಕಚ್ಚಿದೆ. ನಮ್ಮ ಭೂಭಾಗವನ್ನು ಚೀನಾ ಅತಿಕ್ರಮಣ ಮಾಡಿದೆ. ಯುಕ್ರೇನ್‌–ರಷ್ಯಾ ಯುದ್ಧದ ಕುರಿತು ಸರ್ಕಾರ ತನ್ನ ನಿಲುವು ತಿಳಿಸಿಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಹತ್ತನೇ ಸಭೆಗೂ ಭಾರತ ಗೈರಾಗಿದೆ. ಆರ್ಥಿಕ, ರಕ್ಷಣಾ ಕ್ಷೇತ್ರದಲ್ಲಿ ದೇಶ ವೈಫಲ್ಯ ಕಂಡಿದೆ. ಆದರೆ, ಹುಸಿ ದೇಶಭಕ್ತಿ ಹೆಸರಿನಲ್ಲಿ ಜನರ ದಾರಿ ತಪ್ಪಿಸಲಾಗುತ್ತಿದೆ. ಭಾರತ ವಿಶ್ವಗುರು ಎಂದು ನಂಬಿಸಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.