ADVERTISEMENT

ವಿಜಯನಗರ | ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2024, 9:56 IST
Last Updated 1 ಜೂನ್ 2024, 9:56 IST
   

ಹೊಸಪೇಟೆ (ವಿಜಯನಗರ): ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡುವಂತೆ ಆಗ್ರಹಿಸಿ ಬಿಜೆಪಿ ಇಲ್ಲಿ ಶನಿವಾರ ಪ್ರತಿಭಟನೆ ನಡೆಸಿತು. ರಸ್ತೆ ತಡೆ ನಡೆಸಲು ಯತ್ನಿಸಿದ ಹತ್ತಾರು ಕಾರ್ಯಕರ್ತರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಲಾಯಿತು.

ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸಚಿವ ನಾಗೇಂದ್ರ ಈ ಕೂಡಲೇ ರಾಜೀನಾಮೆ ನೀಡಬೇಕು, ನಿಷ್ಪಕ್ಷಪಾತ ತನಿಖೆಯ ಮೂಲಕ ಅವ್ಯವಹಾರವನ್ನು ಬಯಲಿಗೆಳೆದು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣಕಾಸು ವಿಭಾಗದ ಅಧೀಕ್ಷಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಡೆತ್ ನೋಟ್‌ನಲ್ಲಿ ಸಚಿವರ ಹೆಸರು ಉಲ್ಲೇಖ ಮಾಡಿದ್ದಾರೆ, ಈ ಕೂಡಲೇ ಸಚಿವರು ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು. ನಾಗೇಂದ್ರ ಅವರ ಭಾವಚಿತ್ರ ಒಳಗೊಂಡ ಭಿತ್ರಿಪತ್ರಗಳನ್ನು ಹಿಡಿದಿದ್ದ ಕಾರ್ಯಕರ್ತರು ಸಚಿವರ ವಿರುದ್ಧ ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ADVERTISEMENT

ಆರೋಪಿಯನ್ನು ರಕ್ಷಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದ ಕಾರ್ಯಕರ್ತರು, ಸರ್ಕಾರದ  ಧೋರಣೆ ಖಂಡಿಸಿ ಬಲವಂತವಾಗಿ ರಸ್ತೆ ತಡೆಯಲು ಮುಂದಾದರು. ಹೀಗಾಗಿ ಅವರನ್ನು ತಕ್ಷಣ ಬಂಧಿಸಿದ ಪೊಲೀಸರು, ಬಳಿಕ ಬಿಡುಗಡೆ ಮಾಡಿದರು.

ಪಕ್ಷದ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಿಚಡಿ ಕೊಟ್ರೇಶ್‌, ಪಕ್ಷದ ಮುಖಂಡರಾದ ಅಡವಿಸ್ವಾಮಿ, ಸಚ್ಚಿನಕುಮಾರ, ಜಗದೇಶ ಕಾಮಟಗಿ, ದ್ವಾರಕೀಶ್, ಸೂರಿ ಬಂಗಾರ, ಚನ್ನವೀರ ಬದ್ರಿಕಟ್ಟಿ, ಶ್ರೀಕಾಂತ್ ಪೂಜಾರ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.