ಹೊಸಪೇಟೆ (ವಿಜಯನಗರ): ‘ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬರಬೇಕೆಂದು ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತರೇ ಬಯಸುತ್ತಿದ್ದಾರೆ’ ಎಂದು ಮಾಜಿ ಶಾಸಕರೂ ಆದ ಕಾಂಗ್ರೆಸ್ ಮುಖಂಡ ಎಚ್.ಆರ್. ಗವಿಯಪ್ಪ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಗುರುವಾರ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಭಾರತ್ ಜೋಡೋ’ ಪಾದಯಾತ್ರೆ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
ಬಿಜೆಪಿ ಸರ್ಕಾರದ ಕಾರ್ಯವೈಖರಿಯಿಂದ ಆ ಪಕ್ಷ ಹಾಗೂ ಆರ್‌ಎಸ್ಎಸ್ ಕಾರ್ಯಕರ್ತರೇ ಅಸಮಾಧಾನಗೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಬರಬೇಕೆಂದು ಬಯಸುತ್ತಿದ್ದಾರೆ. ಅದಕ್ಕೆ ವಿಜಯನಗರ ಕ್ಷೇತ್ರವೂ ಹೊರತಾಗಿಲ್ಲ ಎಂದರು.
ವಿಜಯನಗರ ಕ್ಷೇತ್ರದಲ್ಲಿ 20 ವರ್ಷಗಳಿಂದ ಅಧಿಕಾರವಿಲ್ಲದೇ ಕಾಂಗ್ರೆಸ್‌ನ ಹಲವು ಮುಖಂಡರು ಮೂಲೆಗುಂಪಾಗಿದ್ದಾರೆ. ಅವರನ್ನು ಬಲಪಡಿಸುವ ಕೆಲಸ ಎಲ್ಲ ಕಾರ್ಯಕರ್ತರು ಸೇರಿಕೊಂಡು ಮಾಡಬೇಕಿದೆ. ನಾನು 40 ವರ್ಷಗಳಿಂದ ರಾಜಕೀಯದಲ್ಲಿರುವೆ. ಆದರೆ, ಕೇಂದ್ರ, ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ಜನವಿರೋಧಿ, ದ್ವೇಷದ ರಾಜಕಾರಣ ನೋಡಿಲ್ಲ. ಅಧಿಕಾರ ಬಲ, ಹಣ ಬಲದಿಂದ ಮನಸೋ ಇಚ್ಛೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.
ಕಳೆದ ಏಳೆಂಟು ವರ್ಷಗಳಲ್ಲಿ ದೇಶದಲ್ಲಿ ಗೊಂದಲ, ತ್ವೇಷಮಯ ವಾತಾವರಣ ಸೃಷ್ಟಿಯಾಗಿದೆ. ರಾಹುಲ್ ಗಾಂಧಿಯವರು ‘ಭಾರತ್ ಜೋಡೋ’ ಪಾದಯಾತ್ರೆ ಮೂಲಕ ಒಡೆದ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ಹಂತದಲ್ಲೂ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ, ಮಾಧ್ಯಮಗಳಲ್ಲಿ ಅದಕ್ಕೆ ಪ್ರಚಾರ ಸಿಗದಂತೆ ಬಿಜೆಪಿ ಸರ್ಕಾರ ಮಾಡುತ್ತಿದೆ. ವ್ಯವಸ್ಥಿತವಾಗಿ ಅವರ ವ್ಯಕ್ತಿತ್ವ ಹರಣ, ಅವಹೇಳನ ಮಾಡುವ ಕೆಲಸ ಮಾಡಲಾಗುತ್ತಿದೆ. ಇಷ್ಟೇ ಅಲ್ಲ, ಮೀಡಿಯಾದಿಂದ ದೇಶದ ಜನರ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿಯವರು ನಿತ್ಯ 30 ಕಿ.ಮೀ ನಡೆಯುತ್ತಿದ್ದಾರೆ. ಅವರ ಪಾದಯಾತ್ರೆ ಅಕ್ಟೋಬರ್ 15ರಂದು ಬಳ್ಳಾರಿಗೆ ಬರಲಿದೆ. ಮೂರು ದಿನಗಳ ಕಾಲ ಅವರೊಂದಿಗೆ ನಾವು ಹೆಜ್ಜೆ ಹಾಕುವುದರ ಮೂಲಕ ಅವರ ಕೈ ಬಲಪಡಿಸೋಣ ಎಂದು ಹೇಳಿದರು.
ಮುಖಂಡರಾದ ರಾಜಶೇಖರ್ ಹಿಟ್ನಾಳ್ ಮಾತನಾಡಿ, ‘ಭಾರತ್ ಜೋಡೋ’ ಪಾದಯಾತ್ರೆಯಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವ ಸಂಕಲ್ಪ ಮಾಡಬೇಕು’ ಎಂದು ತಿಳಿಸಿದರು.
ಜಿಲ್ಲಾ ಅಧ್ಯಕ್ಷ ಬಿ.ವಿ. ಶಿವಯೋಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿನಾಯಕ ಶೆಟ್ಟರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟರಾವ್ ಘೋರ್ಪಡೆ, ಮುಖಂಡರಾದ ಕೆ.ಎಸ್.ಎಲ್.ಸ್ವಾಮಿ, ಗುಜ್ಜಲ ರಘು, ಮಹಮ್ಮದ್ ಇಮಾಮ್ ನಿಯಾಜಿ, ಕುರಿ ಶಿವಮೂರ್ತಿ , ಸೈಯದ್ ಮಹಮ್ಮದ್, ಖಾಜಾ ಹುಸೇನ್, ಎಲ್.ಸಿದ್ದನಗೌಡ, ವೆಂಕಟೇಶ್ವರ ರೆಡ್ಡಿ, ಗುಜ್ಜಲ ನಾಗರಾಜ್, ಭಾಗ್ಯಲಕ್ಷ್ಮೀ ಭರಾಡೆ, ನಿಂಬಗಲ್ ರಾಮಕೃಷ್ಣ, ಎಂ.ಸಿ.ವೀರಸ್ವಾಮಿ, ಬಿ.ಮಾರೆಣ್ಣ, ಕೊಟಗಿನಾಳ್ ಹುಲುಗಪ್ಪ, ಕೆ.ಬಡಾವಲಿ, ಡಾ.ಸಲೀಂ, ಕಮಲಾಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸೈಯದ್ ಆಮಾನುಲ್ಲಾ, ಡಿ.ವೆಂಕಟರಮಣ, ವಿ.ಸೋಮಪ್ಪ, ಭರತ್ ಕುಮಾರ್, ವೀರಭದ್ರ ನಾಯಕ, ಪಿ.ಬಾಬು, ಪಾಂಡು, ಬಣ್ಣದಮನೆ ಸೋಮಶೇಖರ್ ಇತರರಿದ್ದರು.
‘ಬಳ್ಳಾರಿ ಕಾರ್ಯಕ್ರಮಕ್ಕೆ 5 ಲಕ್ಷ ಜನ
‘ಅಕ್ಟೋಬರ್ 15ರಂದು ಬಳ್ಳಾರಿಯಲ್ಲಿ ನಡೆಯಲಿರುವ ‘ಭಾರತ್ ಜೋಡೋ’ ಕಾರ್ಯಕ್ರಮದಲ್ಲಿ ಐದು ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ಎಐಸಿಸಿ ಕಾರ್ಯದರ್ಶಿ ಶ್ರೀಧರ್ ಬಾಬು ತಿಳಿಸಿದರು. ಬಳ್ಳಾರಿಯಲ್ಲಿ ಬಹಿರಂಗ ಸಭೆ ನಡೆಯಲಿದೆ. ಅದರಲ್ಲಿ ವಿಜಯನಗರ, ಬಳ್ಳಾರಿ, ಕೊಪ್ಪಳ, ಗದಗ, ವಿಜಯಪುರ, ಚಿತ್ರದುರ್ಗ ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಜನ ಬರುವರು ಎಂದು ಹೇಳಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.