ADVERTISEMENT

ಜಾತಿ ಸಮೀಕ್ಷೆಯಲ್ಲಿ ಅಕ್ರಮಕ್ಕೆ ಯತ್ನ–ದೂರು

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:11 IST
Last Updated 8 ಮೇ 2025, 15:11 IST
ಹೊಸಪೇಟೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಚ್‌.ವಿ. ಮಂಜುನಾಥ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು
ಹೊಸಪೇಟೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಚ್‌.ವಿ. ಮಂಜುನಾಥ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು   

ಹೊಸಪೇಟೆ (ವಿಜಯನಗರ): ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ನಡೆಸುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯಲ್ಲಿ ತಮ್ಮ ಜಾತಿಯನ್ನು ಸೇರ್ಪಡೆ ಮಾಡಲು ವೀರಶೈವ ಜಂಗಮ ಸಮುದಾಯದವರು ಒತ್ತಾಯಿಸುತ್ತಿದ್ದು, ಈ ಬಗ್ಗೆ ಸರ್ಕಾರ ಎಚ್ಚರದಿಂದ ಇರಬೇಕೆಂದು ಒತ್ತಾಯಿಸಿ ವಿವಿಧ ಸಂಗಟನೆಗಳ ವತಿಯಿಂದ ಗುರುವಾರ ಇಲ್ಲಿ ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಅಧಿಕಾರಿಗಳ ಮೂಲಕ ಸಿಎಂ ಅವರಿಗೆ ಮನವಿ ಸಲ್ಲಿಸಲಾಯಿತು.

ಸಮಗ್ರ ಸಮೀಕ್ಷೆಯ ಆರಂಭದ ಹಂತದಲ್ಲಿ ವೀರಶೈವ ಜಂಗಮ ಸಮುದಾಯದವರು ತಮ್ಮ ಸಮುದಾಯವನ್ನೂ ಸಮೀಕ್ಷೆಗೆ ಒಳಪಡಿಸಿ ಎಂದು ಗಣತಿದಾರರನ್ನು ಒತ್ತಾಯಿಸುವ ಮತ್ತು ಅವರ ಕರ್ತವ್ಯಕ್ಕೆ ಅಡಚಣೆಯುಂಟು ಮಾಡುವ ಕೆಲಸಗಳಿಗೆ ಮುಂದಾಗಿದ್ದಾರೆ. ಈ ಹಿಂದೆ ಕರ್ನಾಟಕದಲ್ಲಿ ವೀರಶೈವ ಜಂಗಮರು ತಮ್ಮನ್ನು `ಬೇಡ ಜಂಗಮರು’ ಎಂದು ಕರೆದುಕೊಳ್ಳುತ್ತಾ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರವನ್ನು ಅಕ್ರಮವಾಗಿ ಪಡೆದುಕೊಂಡಿದ್ದರು. ಅನೇಕ ಪ್ರತಿಭಟನೆಗಳ ಬಳಿಕ ಸರ್ಕಾರ ಹಿಂದುಳಿದ ವರ್ಗಗಳ ಪ್ರವರ್ಗವಾರು ಪಟ್ಟಿಯನ್ನು ಹೊರಡಿಸಿತು ಎಂಬುದನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಸರ್ಕಾರ ಮತ್ತು ನ್ಯಾ. ನಾಗಮೋಹನ್ ದಾಸ್ ಆಯೋಗಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಸರ್ಕಾರ ಈ ಕುರಿತು ತುರ್ತು ಕ್ರಮವಹಿಸದೇ ಇದ್ದಲ್ಲಿ ಆಯೋಗದ ಮೂಲಕ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯಲ್ಲಿ ಚಾರಿತ್ರಿಕವಾದ ಪ್ರಮಾದ ಸಂಭವಿಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ADVERTISEMENT

ನಿಯೋಗದಲ್ಲಿ ಅಂಬೇಡ್ಕರ್ ಸಂಘದ ಸೋಮಶೇಖರ್ ಬಣ್ಣದಮನೆ, ಅಲೆಮಾರಿ, ಅರೆ ಅಲೆಮಾರಿ ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ಸಣ್ಣಮಾರೆಪ್ಪ, ಸುಡುಗಡು ಸಿದ್ಧರ ಸಮಾಜದ ಕಿನ್ನೂರು ಶೇಖಪ್ಪ, ಹಂಡಿಜೋಗಿ ಸಮಾಜದ ಜೆ.ರಮೇಶ, ಶಿಳ್ಳೆಕ್ಯಾತ ಸಮಾಜದ ಸಿದ್ದು ಬೆಳಗಲ್‌, ಸಿಂಧೋಳ್‌ ಸಮಾಜದ ಹಂಪಯ್ಯ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.