
ಹೂವಿನಹಡಗಲಿ: ತಾಲ್ಲೂಕಿನ ಉತ್ತಂಗಿ-ಇಟ್ಟಿಗಿ ಮಾರ್ಗ ಮಧ್ಯೆ ಮಂಗಳವಾರ ಬೆಳಗಿನ ಜಾವ ಸಿಮೆಂಟ್ ಲಾರಿ ಉರುಳಿ ಬಿದ್ದ ಪರಿಣಾಮ ಅರಬಾವಿ-ಚಳ್ಳಕೆರೆ ರಾಜ್ಯ ಹೆದ್ದಾರಿಯಲ್ಲಿ ಆರು ತಾಸು ಸಂಚಾರ ಸ್ಥಗಿತಗೊಂಡ ಘಟನೆ ಜರುಗಿದೆ.
ಹಡಗಲಿ ಕಡೆಗೆ ಬರುತ್ತಿದ್ದ ಸಿಮೆಂಟ್ ಚೀಲ ತುಂಬಿದ್ದ ಲಾರಿ ಹಾಗೂ ಇಟ್ಟಿಗಿ ಕಡೆ ಹೊರಟಿದ್ದ ಸೂರ್ಯಕಾಂತಿ ಸಾಗಣೆಯ ಟ್ರ್ಯಾಕ್ಟರ್ ನಡುವೆ ಡಿಕ್ಕಿ ಸಂಭವಿಸಿದೆ. ಸಿಮೆಂಟ್ ಲಾರಿ ನಿಯಂತ್ರಣ ತಪ್ಪಿ ಇಕ್ಕಟ್ಟಾದ ಕಿರುಸೇತುವೆ ಮೇಲೆ ಉರುಳಿ ಬಿದ್ದಿದ್ದು, ಟ್ರ್ಯಾಕ್ಟರ್ ಟ್ರ್ಯಾಲಿ ಪಕ್ಕದ ಕಂದಕಕ್ಕೆ ಇಳಿದಿದೆ.
ಸೂರ್ಯಕಾಂತಿಯನ್ನು ಮಾರಾಟಕ್ಕೆ ಕೊಂಡೊಯ್ಯುತ್ತಿದ್ದ ರೈತರು ಟ್ರ್ಯಾಕ್ಟರ್ ನಿಂದ ಜಿಗಿದು ಅಪಾಯದಿಂದ ಪಾರಾಗಿದ್ದಾರೆ. ಎರಡೂ ವಾಹನಗಳು ರಸ್ತೆ ಮಧ್ಯೆ ಉರುಳಿ ಬಿದ್ದಿದ್ದರಿಂದ ರಾಜ್ಯ ಹೆದ್ದಾರಿಯ ಮಾರ್ಗ ಬಂದ್ ಆಗಿತ್ತು. ಬಸ್ ಮತ್ತು ಇತರೆ ವಾಹನಗಳು ತಳಕಲ್ಲು, ಮೋರಿಗೇರಿಯ ಮೂಲಕ ಮಾರ್ಗ ಬದಲಾಯಿಸಿ ಸಂಚರಿಸಿದವು.
ಇಟ್ಟಿಗಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ಅಪಘಾತಕ್ಕೀಡಾಗಿದ್ದ ಲಾರಿ, ಟ್ರ್ಯಾಕ್ಟರ್ ಅನ್ನು ತೆರವುಗೊಳಿಸಿದರು. ಮಧ್ಯಾಹ್ನದ ನಂತರ ಈ ಮಾರ್ಗ ಸಂಚಾರಕ್ಕೆ ಮುಕ್ತವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.