
ಹೊಸಪೇಟೆ (ವಿಜಯನಗರ): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಮಂಡಿಸಿದ ಬಜೆಟ್ ವಿಜಯನಗರ ಜಿಲ್ಲೆಯ ಜನರ ಹಲವು ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಹಂಪಿಯಲ್ಲೇ ಬಜೆಟ್ ತಯಾರಿ ಸಭೆ ನಡೆಸಿಯೂ ಹಂಪಿಯ ಅಭಿವೃದ್ಧಿಗೆ ಅನುದಾನ ಒದಗಿಸದೆ ದೊಡ್ಡ ಕನಸು ನುಚ್ಚುನೂರಾಗುವಂತೆ ಮಾಡಿದ್ದಾರೆ.
ಬಜೆಟ್ ಬಗ್ಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಸಮಾಧಾನ ವ್ಯಕ್ತಪಡಿಸಿದ್ದರೆ, ಕಾಂಗ್ರೆಸ್ ಪಕ್ಷ ತೀವ್ರ ಅಕ್ರೋಶ ವ್ಯಕ್ತಪಡಿಸಿದೆ. ಸ್ಲಂ ಜನರ ಸಂಘಟನೆ, ವಿಜಯನಗರ ರೈಲ್ವೆ ಬಳಕೆದಾರರ ಕ್ರಿಯಾ ಸಮಿತಿಗಳೂ ಟೀಕಿಸಿವೆ. ಬಿಜೆಪಿ ಮಾತ್ರ ಬಜೆಟ್ ಅನ್ನು ಸ್ವಾಗತಿಸಿದೆ.
‘ಸಚಿವೆ ನಿರ್ಮಲಾ ಸೀತಾರಾಮನ್ ಹಂಪಿಯಲ್ಲಿ ಸಭೆ ನಡೆಸಿದರು, ಬಳಿಕ ಪ್ರವಾಸೋದ್ಯಮ ಸಚಿವರೂ ಇಲ್ಲಿಗೆ ಬಂದು ಹೋದರು, ಆದರೂ ಹಂಪಿಯನ್ನು ಯಾವ ಯೋಜನೆಯಲ್ಲೂ ಸೇರಿಸಿದಂತಿಲ್ಲ, ಇದು ಅನ್ಯಾಯ’ ಎಂದು ಜಿಲ್ಲಾ ರೈಲ್ವೆ ಬೆಳಕೆದಾರರ ಕ್ರಿಯಾ ಸಮಿತಿಯ ಅಧ್ಯಕ್ಷ ವೈ.ಯಮುನೇಶ್ ಪ್ರತಿಕ್ರಿಯಿಸಿದರು.
ತರಬೇತಿಗೆ ಖುಷಿ: ‘ದೇಶದ 20 ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿರುವ 10 ಸಾವಿರ ಪ್ರವಾಸಿ ಮಾರ್ಗದರ್ಶಿಗಳಿಗೆ ಐಐಎಂ ಸಹಭಾಗಿತ್ವದಲ್ಲಿ ಹೈಬ್ರಿಡ್ ಮಾದರಿಯ 12 ವಾರಗಳ ಅತ್ಯುತ್ತಮ ಗುಣಮಟ್ಟದ ತರಬೇತಿ ಕೋರ್ಸ್ ನಡೆಸಲು ಮುಂದಾಗಿರುವುದು ಖುಷಿಯ ಸಂಗತಿ, ಅಂತಹ ಸ್ಥಳಗಳಲ್ಲಿ ಹಂಪಿಯೂ ಸೇರ್ಪಡೆಗೊಳ್ಳುವ ಆಶಯ ಇಟ್ಟುಕೊಳ್ಳಲಾಗಿದೆ’ ಎಂದು ಕರ್ನಾಟಕ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಪ್ರಧಾನ ಕಾರ್ಯದರ್ಶಿ ವಿರುಪಾಕ್ಷಿ ವಿ.ಹಂಪಿ ಹೇಳಿದರು.
ನಿರಾಶೆ ತಂದಿದೆ: ‘ಬಜೆಟ್‌ನಲ್ಲಿ ಹಂಪಿ, ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಹಾಗೂ ಜಿಲ್ಲೆಯ ಇತರ ಆದ್ಯತೆಗಳ ಕುರಿತಂತೆ ಯಾವುದೇ ಘೋಷಣೆಗಳನ್ನು ಮಾಡಿಲ್ಲ. ಇದರಿಂದ ಈ ಭಾಗದ ಎಲ್ಲಾ ಜನರಿಗೆ ಬೇಸರವಾಗಿದೆ. ಮುಖ್ಯವಾಗಿ ಹಂಪಿಯ ಅಭಿವೃದ್ಧಿಗೆ ಅನುದಾನ ನೀಡದ ಕಾರಣ ನಿರೀಕ್ಷೆಗಳೆಲ್ಲವೂ ಹುಸಿಯಾಗಿದೆ’ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಘದ ಅಧ್ಯಕ್ಷ ಅಶ್ವಿನ್ ಕೊತ್ತಂಬರಿ ಬೇಸರ ವ್ಯಕ್ತಪಡಿಸಿದ್ದಾರೆ.
‘ಜನಪ್ರಿಯತೆಗೆ ಮಣೆ ಹಾಕದೆ, ಸುಸ್ಥಿರ ಅಭಿವೃದ್ಧಿಯತ್ತ ಗುರಿ ನೆಟ್ಟ ಬಜೆಟ್ ಇದು. ಮೈನಿಂಗ್ ಕಾರಿಡಾರ್ ಸಹಿತ ಏಳು ಎಕ್ಸ್‌ಪ್ರೆಸ್ ಕಾರಿಡಾರ್ ನಿರ್ಮಿಸಲು ಹೊರಟಿರುವುದು ಆಶಾದಾಯಕ ಬೆಳವಣಿಗೆ, ಪರಂಪರೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಅಂಶ ಇದ್ದು, ಇದರ ಲಾಭ ಹಂಪಿಗೂ ಸಿಗಬಹುದು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಸಂಜೀವ ರೆಡ್ಡಿ ಹೇಳಿದರು.
‘ವಿಜಯನಗರ ಜಿಲ್ಲೆಗೆ ಮಾತ್ರವಲ್ಲ ರಾಜ್ಯಕ್ಕೂ ಯಾವುದೇ ಹೊಸ ಘೋಷಣೆ ಇಲ್ಲದ ನಿರಾಶಾದಾಯಕ ಬಜೆಟ್ ಇದು. ದಿವಾಳಿ ಸರ್ಕಾರವನ್ನು ಮುನ್ನಡೆಸುತ್ತಿರುವಂತಹ ಭಾವ ಮೂಡುತ್ತಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ ಆರೋಪಿಸಿದರು.
ದೂರದೃಷ್ಟಿ ಇಲ್ಲದ ನಿರಾಶಾದಾಯಕ ಬಜೆಟ್ ಬಡ ಮಧ್ಯಮ ಸ್ಲಂ ವರ್ಗದ ವಿರೋಧಿ ಬಜೆಟ್ ಹಳೆ ಸರಕು ಹೊಸ ಶೀಶೆ ಎನ್ನುವಂತಿದೆ ಕೇಂದ್ರ ಬಜೆಟ್ಎನ್.ವೆಂಕಟೇಶ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಲಂ ಜನರ ಸಂಘಟನೆ
ಕೇಂದ್ರ ಬಜೆಟ್ ಸಾರ್ವಜನಿಕ ಶಿಕ್ಷಣವನ್ನು ಸಂಪೂರ್ಣವಾಗಿ ನಾಶಗೊಳಿಸಲು ರೂಪಿಸಿರುವ ಒಂದು ವಂಚನೆಯ ನೀಲಿನಕ್ಷೆ ಎಂಬ ಭಾವ ಮೂಡುತ್ತಿದೆಯು.ಉಮಾದೇವಿ ಜಿಲ್ಲಾ ಕಾರ್ಯದರ್ಶಿ ಎಐಡಿಎಸ್‌ಒ
ಎಲ್ಲ ವರ್ಗದವರಿಗೆ ಅನುಕೂಲವಾಗುವ ಸಮತೋಲಿತ ಬಜೆಟ್ ಇದು. ಹಂಪಿಯ ಅಭಿವೃದ್ಧಿಗೆ ಸಹ ಬಜೆಟ್‌ನಿಂದ ಹೆಚ್ಚಿನ ಬಲ ಸಿಗಲಿದೆ ಎಂಬುದಂತೂ ಸತ್ಯಕೃಷ್ಣ ನಾಯ್ಕ, ಶಾಸಕ, ಹೂವಿನಹಡಗಲಿ ಕ್ಷೇತ್ರ
ಬಜೆಟ್ ಪ್ರತಿಕ್ರಿಯೆಗಳು
‘ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ತವ್ಯ ಭವನದಲ್ಲಿ ಕುಳಿತು ಕರ್ತವ್ಯ ಮರೆತ ಬಜೆಟ್ ನೀಡಿದ್ದಾರೆ. ಆರ್ಥಿಕ ಅಭಿವೃದ್ಧಿ, ಉತ್ಪಾದಕತೆ, ಎಲ್ಲರನ್ನೂ ಒಳಗೊಳ್ಳುವಿಕೆಯ ಕರ್ತವ್ಯ ಮಂತ್ರಗಳನ್ನು ಈ ಬಜೆಟ್ ಹುಸಿಯಾಗಿಸಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣಕ್ಕೆ ಕೇವಲ ₹62 ಸಾವಿರ ಕೋಟಿ ಕೊಡಲಾಗಿದೆ. ಇದು ಯಾವುದಕ್ಕೂ ಸಾಲದು. ಮನರೇಗಾಕ್ಕೆ ಕೊನೇ ಮೊಳೆ ಹೊಡೆಯಲಾಗಿದೆ. ಬಂಡವಾಳಶಾಹಿಗಳಿಗೆ ದಾರಿ ಮಾಡಿಕೊಡಲಾಗಿದೆ.ಇ. ತುಕಾರಾಂ, ಸಂಸದ
ಜಾಗತಿಕ ಅನಿಶ್ಚಿತೆ ಹಿನ್ನೆಲೆಯಲ್ಲಿ ರಕ್ಷಣಾತ್ಮಕ ಹಾಗೂ ಆರ್ಥಿಕ ಬೆಳವಣಿಗೆ ಹಾದಿಯಲ್ಲಿ ಮುಂದುವರಿಯುವ ತಂತ್ರಗಾರಿಕೆಯನ್ನು ನಿರ್ಮಲಾ ಸೀತಾರಾಮನ್ ಅನುಸರಿಸಿದ್ದಾರೆ. ಬಜೆಟ್‌ನಲ್ಲಿ ಜನರಿಗೆ ಯಾವುದೇ ಹೆಚ್ಚಿನ ಹೊರೆ ಇಲ್ಲದೇ ಇರುವುದೇ ಸ್ವಾಗತಾರ್ಹ. ಕಲ್ಯಾಣ ಕರ್ನಾಟಕಕ್ಕೆ ಬಜೆಟ್‌ನಲ್ಲಿ ಅನ್ಯಾಯವಾಗಿದೆ. ಆದರೂ ತಂತ್ರಜ್ಞಾನ, ಕ್ರೀಡೆ, ಫಾರ್ಮಸಿ, ಎಂಎಸ್ಎಂಇ ಕ್ಷೇತ್ರಗಳಿಗೆ ಬೆಂಬಲ ಸಿಕ್ಕದೆ.ಪನ್ನರಾಜ್, ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ ದಕ್ಷಿಣ ಪ್ರಾಂತದ ಮಾಜಿ ಅಧ್ಯಕ್ಷ
ಕೇಂದ್ರ ಬಜೆಟ್ 2026–27ರಲ್ಲಿ ಉದ್ಯೋಗ, ಆರೋಗ್ಯ, ಕೃಷಿ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಕರ್ನಾಟಕಕ್ಕೆ ನೇರವಾಗಿ ಪ್ರಯೋಜನವಾಗುವ ಯಾವುದೇ ಸೌಲಭ್ಯಗಳನ್ನು ಘೋಷಿಸಲಾಗಿಲ್ಲ. ರೈತರು, ಯುವಕರು ಹಾಗೂ ಸಾಮಾನ್ಯ ಜನರ ಜೀವನಮಟ್ಟ ಸುಧಾರಣೆಗೆ ಅಗತ್ಯವಾದ ಕ್ರಮಗಳು ಕಾಣಿಸುತ್ತಿಲ್ಲ. ರಾಜ್ಯದ ಅಗತ್ಯಗಳು ಮತ್ತು ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಇದು ಜನ ವಿರೋಧಿ ಬಜೆಟ್ಶ್ರೀಶೈಲ ಆಲದಹಳ್ಳಿ, ಜನಸಂಗ್ರಾಮ ಪರಿಷತ್ ಮುಖಂಡ
ಸಣ್ಣ ಪ್ರಮಾಣದ ಆದಾಯ ತೆರಿಗೆ ಪಾವತಿಯಲ್ಲಿ ಶಿಕ್ಷೆಯನ್ನು ರದ್ದು ಮಾಡಿ, ದಂಡ ವಿಧಿಸುತ್ತಿರುವುದು ಸೂಕ್ತ ನಿರ್ಧಾರ. ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಿರುವುದು, ಕೆಲ ವಿಮೆಗಳಿಗೆ ತೆರಿಗೆ ವಿನಾಯಿತಿ ನೀಡಿರುವುದು ಬಡ, ಮಧ್ಯಮ ವರ್ಗದವರ ಹಿತಾಸಕ್ತಿಗಳನ್ನು ಕಾಪಾಡಲಿದೆ. ಜಾಗತಿಕ ಆರ್ಥಿಕ ಸಂಕಷ್ಟದ ದಿನಗಳಲ್ಲಿ ಮಂಡನೆ ಆಗಿರುವ ಸ್ವಾಗತಾರ್ಹ ಬಜೆಟ್.ಅವ್ವಾರು ಮಂಜುನಾಥ್, ಅಧ್ಯಕ್ಷ, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಬಳ್ಳಾರಿ
ಸಾರ್ವಜನಿಕ ಶಿಕ್ಷಣವನ್ನು ಕಾರ್ಪೊರೇಟೀಕರಣಗೊಳಿಸುವ ಬಜೆಟ್ ಇದು. ‘ಯೂನಿವರ್ಸಿಟಿ ಟೌನ್‌ಶಿಪ್’ಗಳ ಘೋಷಣೆಯು ಒಂದು ವಂಚನೆ. ಕೈಗಾರಿಕಾ ಕೇಂದ್ರಗಳ ಸಮೀಪ ಇರುವ ಮೇಲ್ವರ್ಗದ ವಿದ್ಯಾರ್ಥಿಗಳಿಗೆ ಮೀಸಲಾದ ಪ್ರದೇಶ ನಿರ್ಮಿಸುವ ಯೋಜನೆ. ನೇರ ಅನುದಾನದ ಬದಲಿಗೆ ‘ಸಾಲ ಆಧಾರಿತ ಧನಸಹಾಯ’ಕ್ಕೆ ಬದಲಾಗುತ್ತಿರುವುದು ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸುವ ಬದಲು ಐಷಾರಾಮಿ ವಸ್ತುವನ್ನಾಗಿ ಪರಿವರ್ತಿಸುವ ನೇರ ಪ್ರಯತ್ನವಾಗಿದೆ.ಕಂಬಳಿ ಮಂಜುನಾಥ, ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ
ವಿಕಸಿತ ಭಾರತ ನಿರ್ಮಾಣಕ್ಕೆ ದೂರದೃಷ್ಟಿಯ ಬಜೆಟ್ ಇದು. ಎಂಎಸ್ಎಂಇ, ಉತ್ಪಾದನೆ, ಸೇವಾ ವಲಯಕ್ಕೆ ಹೆಚ್ಚಿನ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಂದರುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದಾಯ ತೆರಿಗೆ ರಿಟನ್ಸ್ ಸಲ್ಲಿಕೆ ಸರಳೀಕರಣಗೊಂಡಿದೆ. ಫ್ರೀ ಬೀಗಳಿಗೆ ಆದ್ಯತೆ ಕೊಟ್ಟಿಲ್ಲ. ವಿದೇಶಿ ನೇರ ಹೂಡಿಕೆಯನ್ನೂ ಪ್ರೋತ್ಸಾಹಿಸಲಾಗುತ್ತಿದೆ.ಡಾ. ಅರುಣಾ ಕಾಮಿನೇನಿ, ಬಿಜೆಪಿ ನಾಯಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.