ಹರಪನಹಳ್ಳಿ: ವಿಜಯನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೊಂಗ್ಜಾಯ್ ಮೊಹಮದ ಅಲಿ ಅಕ್ರಂ ಷಾ ಅವರು ಸಾರ್ವಜನಿಕರ ಜೊತೆ ದುರ್ವರ್ತನೆ ತೋರಿದ್ದಾರೆ ಎಂದು ಕಮ್ಯುನಿಷ್ಟ ಪಕ್ಷದ (ಎಂಎಲ್) ಮುಖಂಡರು ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸಿಪಿಐ ಎಂಎಲ್ ತಾಲ್ಲೂಕು ಕಾರ್ಯದರ್ಶಿ ಗುಳೇದಹಟ್ಟಿ ಸಂತೋಷ ಮಾತನಾಡಿ, ಈಚೆಗೆ ಸಾರ್ವಜನಿಕರು ಮನವಿ ಪತ್ರ ಹಿಡಿದುಕೊಂಡು ನ್ಯಾಯ ಕೇಳಲು ಹರಪನಹಳ್ಳಿಯಿಂದ ಜಿಲ್ಲಾ ಪಂಚಾಯಿತಿ ಕಚೇರಿಗೆ ಹೋಗಿದ್ದಾಗ, ಅವರನ್ನು ಸಿಇಒ ಕಚೇರಿಯಿಂದ ಹೊರಗೆ ಕಳುಹಿಸಿದ್ದಾರೆ. ಅಲ್ಲದೆ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ದೂರಿದರು.
ಸಿಪಿಐ ಎಂಎಲ್ ಜಿಲ್ಲಾ ಕಾರ್ಯದರ್ಶಿ ಸಂದೇರ ಪರಶುರಾಮ್ ಮಾತನಾಡಿ, ಸಿಇಒ ಅವರನ್ನು ಸೇವೆಯಿಂದ ಅಮಾನತುಗೊಳಿಸಿ, ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಸಿಬ್ಬಂದಿ ರೇಣುಕಮ್ಮ ಮಾತನಾಡಿ, ವಯಸ್ಸಿನ ಮಿತಿ ನೆಪ ಹೇಳಿ ಕಸ ವಿಂಗಡಕಳಾಗಿರುವ ನನಗೆ ಮೂರು ವರ್ಷದಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಂಬಳ ಕೊಟ್ಟಿಲ್ಲ. ಈ ಕುರಿತು ನನಗೆ ನ್ಯಾಯ ಕೊಡಿಸಿ ಎಂದು ಸಿಇಒ ಅವರ ಬಳಿಗೆ ಹೋದರೆ, ನನ್ನ ಮೇಲೆ ರೇಗಾಡಿ, ನಿಂದಿಸಿ ವಾಪಸ್ ಕಳಿಸಿದ್ದಾರೆ. ಈ ಬಗ್ಗೆ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಮುಖಂಡರಾದ ಹುಲಿಕಟ್ಟೆ ಮೈಲಪ್ಪ, ಮರಿಯಮ್ಮ, ಬಿ.ಎಸ್.ಪ್ರಕಾಶ್, ರಾಘವೇಂದ್ರ, ಖಲೀಂ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.