ಹೊಸಪೇಟೆ (ವಿಜಯನಗರ): ನಗರ ಮತ್ತು ಸುತ್ತಮುತ್ತ ಮಂಗಳವಾರ ಮಧ್ಯರಾತ್ರಿ ಶ್ರದ್ಧಾ, ಭಕ್ತಿಯಿಂದ ಕ್ರಿಸ್‌ಮಸ್ ಆಚರಿಸಲಾಯಿತು. ಬುಧವಾರ ಬೆಳಿಗ್ಗೆ ವಿವಿಧ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
ನಗರದ ಸೇಕ್ರೆಡ್ ಹಾರ್ಟ್ ಕೆಥೋಲಿಕ್ ಚರ್ಚ್‌ನ ಧರ್ಮಗುರು ಭಗವಂತ್ ರಾಜ್ ಅವರ ನೇತೃತ್ವದಲ್ಲಿ ರಾತ್ರಿ 11ರಿಂದ ಮಧ್ಯರಾತ್ರಿ 2 ಗಂಟೆವರೆಗೆ ಕ್ರಿಸ್‌ಮಸ್ ಆಚರಣೆ ಅದ್ಧೂರಿಯಾಗಿ ನಡೆಯಿತು. ಬಲಿಪೂಜೆ ಹಾಗೂ ಸಾಮೂಹಿಕ ಪ್ರಾರ್ಥನೆ ಜರುಗಿತು. ಪಾದ್ರಿಗಳಾದ ಪ್ರವೀಣ್, ಜೋಯ್ ಇದ್ದರು.
ಕ್ರಿಸ್‌ಮಸ್ ವಿಶೇಷ ಪ್ರಾರ್ಥನೆಯಲ್ಲಿ ಡಾನ್ ಬಾಸ್ಕೊ ಶಿಕ್ಷಣ ಸಮೂಹದ ಮುಖ್ಯಸ್ಥ ರೋಷನ್ ಅವರು ಧಾರ್ಮಿಕ ಪ್ರವಚನ ನೀಡಿ, ‘ಪ್ರಭು ಯೇಸು ದಾರಿ ತಪ್ಪಿದ ಮಕ್ಕಳನ್ನು ಹುಡುಕುತ್ತಾ ಬಂದಿದ್ದಾರೆ. ಅಂಧಕಾರದಲ್ಲಿ ಇದ್ದವರಿಗೆ ಬೆಳಕು ನೀಡಲಿದ್ದಾರೆ, ದಾರಿ ತಪ್ಪಿದವರನ್ನು ಸರಿಪಡಿಸಲಿದ್ದಾರೆ’ ಎಂದರು.
‘ನಾವೆಲ್ಲರೂ ಅವರ ಮಾರ್ಗದಲ್ಲಿ ನಡೆಯಬೇಕು. ಧರ್ಮ ಎಂಬುದು ಬಾಹ್ಯ ಅಚರಣೆ ಆಗಬಾರದು. ಮನಸ್ಸಿನಿಂದ ಪರರನ್ನು ಪ್ರೀತಿಸಬೇಕು. ಹೃದಯದ ಅಂಧಕಾರ ತೊರೆಯಲು ಕ್ರಿಸ್‌ಮಸ್ ದಾರಿ ಮಾಡಿಕೊಡುತ್ತದೆ’ ಎಂದು ಹೇಳಿದರು.
ಕ್ಲಿಂಟನ್, ಪೀಟರ್ ದಾಸ್, ಪಾದ್ರಿ ಭಗವಂತ ರಾಜ್ ಮಾರ್ಗದರ್ಶನದಲ್ಲಿ ಕ್ರಿಸ್ತನ ಜನನ ವೃತ್ತಾತ ಸಾರುವ ಗೋದಲಿ ನಿರ್ಮಿಸಲಾಗಿತ್ತು.
ಇತರೆಡೆ ಆಚರಣೆ: ದೊಡ್ಡ ಮಸೀದಿ ಸಮೀಪದ ಸಿಎಸ್‌ಐ ಚರ್ಚ್, ಕಾಲೇಜು ರಸ್ತೆಯ ಅವಾಂಚಿಕಲ್ ಚರ್ಚ್, ಬಸವೇಶ್ವರ ಬಡಾವಣೆ, ಆಜಾದ್ ನಗರ, ಎಂ.ಜೆ.ನಗರ, ಐಎಸ್‌ಆರ್ ರೋಡ್ ಚರ್ಚ್‌ಗಳಲ್ಲಿ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಗೋದಲಿಗಳು ಗಮನ ಸೆಳೆದವು. ನಕ್ಷತ್ರಗಳು ರಾರಾಜಿಸಿದವು.
ಚಿಕನ್ ಮಟನ್ ದುಬಾರಿ
ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಮಾಂಸದ ಬಗೆಬಗೆಯ ಖಾದ್ಯ ತಯಾರಿಸಲಾಯಿತು. ಚಿಕನ್ ಮಟನ್ ದರ ಹೆಚ್ಚಳದಿಂದಾಗಿ ಜನರ ಜೇಬಿಗೆ ಭಾರ ಎನಿಸಿತು. ಚಿಕನ್ ದರ ಕಿಲೋಗೆ ₹220 ಇದ್ದುದು ಬುಧವಾರ ₹280ಕ್ಕೆ ಹೆಚ್ಚಳವಾಗಿತ್ತು. ಬೆಳಿಗ್ಗೆ 10 ಗಂಟೆಗೇ ಚಿಕನ್ ಮಾರಾಟವಾಗಿತ್ತು. ಮಟನ್ ಕೆಜಿಗೆ ₹600 ಇದ್ದುದು ಬುಧವಾರ ₹750ಕ್ಕೆ ಏರಿಕೆಯಾಗಿತ್ತು. ಒಂಟು ಕಟ್ಟು ಕೊತ್ತಂಬರಿಗೆ ₹10 ದರವಿತ್ತು. ಪುದಿನ ಸೊಪ್ಪು ಸಿಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.