
ಹೊಸಪೇಟೆ: ರಾಜ್ಯದ ಅನುಸೂಚಿತ ಉದ್ದಿಮೆಗಳು ಕನಿಷ್ಠ ವೇತನವನ್ನು ಘೋಷಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಮಂಗಳವಾರ ಇಲ್ಲಿನ ಜಿಲ್ಲಾ ಕಾರ್ಮಿಕ ಅಧಿಕಾರಿಯವರ ಕಚೇರಿ ಬಳಿ ಪ್ರತಿಭಟನೆ ನಡೆಯಿತು ಹಾಗೂ ಮುಖ್ಯಮಂತ್ರಿ ಅವರಿಗೆ ಮನವಿ ಕಳುಹಿಸಿಕೊಡಲಾಯಿತು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ಆರ್.ಎಸ್.ಬಸವರಾಜ್ ಮಾತನಾಡಿ, ರಾಜ್ಯ ಸರ್ಕಾರ 2025ರ ಏಪ್ರಿಲ್‌ನಲ್ಲಿ ರಾಜ್ಯದಲ್ಲಿನ ಅನುಸೂಚಿತ ಉದ್ದಿಮೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅನ್ವಯವಾಗುವ ಕನಿಷ್ಠ ವೇತನದ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಅಧಿಸೂಚನೆಗಳಿಗೆ ಕಾರ್ಮಿಕ ಸಂಘಟನೆಗಳು, ಮಾಲೀಕರ ಸಂಘಟನೆಗಳು ಮತ್ತು ಇತರರು ಆಕ್ಷೇಪಣೆಗಳು ಹಾಗೂ ಸಲಹೆಗಳನ್ನು ಸಲ್ಲಿಸಿದ್ದು, ಕನಿಷ್ಠ ವೇತನ ಸಲಹಾ ಮಂಡಳಿಯು ಇದರ ಕುರಿತು ಎರಡು ಸುತ್ತುಗಳ ಚರ್ಚೆಯನ್ನು ನಡೆಸಿರುತ್ತದೆ. ಸಲಹಾ ಮಂಡಳಿ ತನ್ನ ಅಭಿಪ್ರಾಯವನ್ನು 2025 ಆಗಸ್ಟ್‌ನಲ್ಲೇ ಸಲ್ಲಿಸಿದ್ದರೂ ವೈಜ್ಞಾನಿಕವಾದ ಹಾಗೂ ಕಾನೂನು ಬದ್ಧವಾದ ಕನಿಷ್ಠ ವೇತನದ ಅಂತಿಮ ಪ್ರಕಟನೆಯು ಆಗದಿರುವುದು ಸರಿಯಲ್ಲ ಎಂದರು.
‘ಕನಿಷ್ಠ ವೇತನ ಪರಿಷ್ಕರಣೆಯಾಗಿ ಏಳು ವರ್ಷಗಳು ಕಳೆದಿವೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಹಾಗೂ ಲಕ್ಷಾಂತರ ದುರ್ಬಲ ಕಾರ್ಮಿಕ ವರ್ಗಕ್ಕೆ ಆರ್ಥಿಕ ಸ್ವಾವಲಂಬನೆಯನ್ನು ಖಾತರಿಪಡಿಸುವ ಕನಿಷ್ಠವೇತನದ ಪ್ರಕಟಣೆಯನ್ನು ಕೂಡಲೇ ರಾಜ್ಯ ಸರ್ಕಾರವು ಮಾಡಬೇಕು’ ಎಂದು ಅವರು ಒತ್ತಾಯಿಸಿದರು.
ಸಿಐಟಿಯು ಸಹಕಾರ್ಯದರ್ಶಿ ಎಲ್.ಮಂಜುನಾಥ್, ಅಂಗನವಾಡಿ ಫೆಡರೇಷನ್‌ನ ನಾಗರತ್ನಮ್ಮ, ಕಟ್ಟಡ ಕಾರ್ಮಿಕರ ಮುಖಂಡ ಎನ್.ಯಲ್ಲಾಲಿಂಗ, ಹಮಾಲಿ ಕಾರ್ಮಿಕ ಮುಖಂಡ ಸುಬ್ಬಾರೆಡ್ಡಿ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ನಾಗಭೂಷಣ ರೆಡ್ಡಿ, ವಿವಿಧ ತಾಲ್ಲೂಕುಗಳ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.