ADVERTISEMENT

ಹೊಸಪೇಟೆ | ಜಿಲ್ಲಾಧಿಕಾರಿಯಿಂದ ಸೈಕಲ್‌ನಲ್ಲಿ ಸ್ವಚ್ಛತೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2023, 7:07 IST
Last Updated 9 ಡಿಸೆಂಬರ್ 2023, 7:07 IST
   

ಹೊಸಪೇಟೆ (ವಿಜಯನಗರ): ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್ ಅವರು ಶನಿವಾರ ಬೆಳಿಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಹೊಸಪೇಟೆ ನಗರದಲ್ಲಿ ಸೈಕಲ್‌ನಲ್ಲಿ ಸಂಚರಿಸಿ ಸ್ವಚ್ಛತೆ ಕಾಪಾಡಲು ನಗರಸಭೆ ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದರು.

ಕೆಕೆಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ತೆರಳಿದ ಅವರು ಅಲ್ಲಿನ ಶೌಚಾಲಯದ ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸಿದರು. ಹೊಸಪೇಟೆ ಬಸ್‌ ನಿಲ್ದಾಣದಲ್ಲಿ ಶುಚಿತ್ವ ಮಾಯವಾಗಿದೆ, ಬಸ್ಸಲ್ಲಿ ನಿದ್ದೆ ಮಾಡುತ್ತಿದ್ದರೂ, ಬಸ್‌ನಿಲ್ದಾಣದೊಳಗೆ ಬಸ್‌ ಬಂದ ತಕ್ಷಣ ದುರ್ವಾಸನೆಯಿಂದಲೇ ಹೊಸಪೇಟೆ ಬಂದಿದ್ದು ತಿಳಿಯುತ್ತದೆ ಎಂಬ ಟೀಕೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ಇಲ್ಲಿನ ಶುಚಿತ್ವಕ್ಕೆ ಕೈಗೊಂಡ ಕ್ರಮಗಳನ್ನು ಖುದ್ದು ಪರಿಶೀಲಿಸಿದರು.

ಬಳಿಕ ಜಿಲ್ಲಾಧಿಕಾರಿ ಅವರು ತರಕಾರಿ ಮಾರುಕಟ್ಟೆ, ವಾಲ್ಮೀಕಿ ವೃತ್ತ, ಮೂರಂಗಡಿ ವೃತ್ತ, ದೊಡ್ಡ ಮಸೀದಿ ಸಹಿತ ಹಲವಾರು ಕಡೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

ADVERTISEMENT

‘ಕಸ ನಿರ್ವಹಣೆ, ಚರಂಡಿಗಳ ಸ್ಥಿತಿಗತಿ ಹಾಗೂ ಬೀದಿನಾಯಿಗಳ ಹಾವಳಿ ಕುರಿತು ಮಾಹಿತಿ ಪಡೆಯುವುದು ಅವರ ನಗರ ಪ್ರದಕ್ಷಿಣೆಯ ಮುಖ್ಯ ಉದ್ದೇಶವಾಗಿತ್ತು.  ಕೆಲವೆಡೆ ಸಾರ್ವಜನಿಕರು ಬೀದಿನಾಯಿ ಕಾಟದ ಬಗ್ಗೆ ತಮ್ಮ ಅಳಲು ತೋಡಿಕೊಂಡರು. ಕಸ ನಿರ್ವಹಣೆ, ಚರಂಡಿಗಳ ನಿರ್ವಹಣೆ ಬಗ್ಗೆ ಜಿಲ್ಲಾಧಿಕಾರಿ ಅವರು ಕೆಲವೆಡೆ ಸೂಕ್ತ ಸಲಹೆ ನೀಡಿದರು’ ಎಂದು ನಗರಸಭೆಯ ಅಧಿಕಾರಿಯೊಬ್ಬರು ತಿಳಿಸಿದರು.

ನಗರಸಭೆ ಆಯುಕ್ತ ಬಿ.ಟಿ.ಬಂಡಿವಡ್ಡರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸತೀಶ್, ವ್ಯವಸ್ಥಾಪಕ ಕೃಷ್ಣಮೂರ್ತಿ, ಸಮುದಾಯ ಅಭಿವೃದ್ಧಿ ಅಧಿಕಾರಿ ರವಿಕುಮಾರ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.