ADVERTISEMENT

ಹೊಸಪೇಟೆ: ಹಣ ಪಡೆದು ‘ಬಿ’ ಫಾರಂ ಹಂಚಿಕೆ-ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆರೋಪ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 11:22 IST
Last Updated 22 ಡಿಸೆಂಬರ್ 2021, 11:22 IST
ಎಚ್‌.ಎಲ್‌. ಸಂತೋಷ್‌ ಕುಮಾರ್‌
ಎಚ್‌.ಎಲ್‌. ಸಂತೋಷ್‌ ಕುಮಾರ್‌   

ಹೊಸಪೇಟೆ(ವಿಜಯನಗರ): ‘ಸ್ಥಳೀಯ ಕಾಂಗ್ರೆಸ್‌ ಮುಖಂಡರು ಹಣ ಪಡೆದು ‘ಬಿ’ ಫಾರಂ ಹಂಚಿಕೆ ಮಾಡಿದ್ದಾರೆ’ ಎಂದು 17ನೇ ವಾರ್ಡಿನ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಚ್‌.ಎಲ್‌.ಸಂತೋಷ್ ಕುಮಾರ್ ಆರೋಪಿಸಿದರು.

‘ಪಕ್ಷ ನನಗೆ ಟಿಕೆಟ್‌ ನೀಡುವ ಭರವಸೆ ನೀಡಿತ್ತು. ನಾಮಪತ್ರ ಸಲ್ಲಿಸಿ, ಅನಂತರ ‘ಬಿ’ ಫಾರಂ ಕೊಡಲು ತೀರ್ಮಾನಿಸಿದ್ದೆ. ನನಗೆ ‘ಬಿ’ ಫಾರಂ ಕೊಟ್ಟ ನಂತರ ಚುನಾವಣಾಧಿಕಾರಿಗೆ ಸಲ್ಲಿಸಿದ್ದೆ. ಆದರೆ, ಸ್ಥಳೀಯ ಮುಖಂಡರು ರಾತ್ರೋರಾತ್ರಿ ಹಣ ಬಲ ಹೊಂದಿರುವ ಮತ್ತೊಬ್ಬ ಅಭ್ಯರ್ಥಿಗೆ ಕಾಂಗ್ರೆಸ್‌ ‘ಬಿ’ ಫಾರಂ ವಿತರಿಸಿದ್ದಾರೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದರು.

‘45 ವರ್ಷಗಳಿಂದ ಪಕ್ಷಕ್ಕೆ ಸೇವೆ ಸಲ್ಲಿಸುತ್ತ ಬಂದಿದ್ದೇನೆ. ನನಗೆ ಸ್ಥಳೀಯ ಮುಖಂಡರು ಅನ್ಯಾಯ ಮಾಡಿದ್ದಾರೆ. ಆದರೆ, ನಾನು ಹಿಂಜರಿದಿಲ್ಲ. ಪಕ್ಷೇತರನಾಗಿ ಕಣಕ್ಕಿಳಿದಿದ್ದೇನೆ. ಸ್ಥಳೀಯ ಮುಖಂಡರ ಬಗ್ಗೆ ರಾಜ್ಯ ಮುಖಂಡರಿಗೆ ದೂರು ಸಲ್ಲಿಸಿರುವೆ’ ಎಂದು ಹೇಳಿದರು.

ADVERTISEMENT

ಈ ಕುರಿತು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ವಿನಾಯಕ ಶೆಟ್ಟರ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಪಕ್ಷದ ಹಿರಿಯ ಮುಖಂಡರ ಸೂಚನೆ ಪ್ರಕಾರ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ಹಣ ಪಡೆದು ಟಿಕೆಟ್ ಹಂಚಿರುವ ಪ್ರಶ್ನೆಯೇ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

ಸಾಬೀರ್ ಹುಸೇನ್, ಖಾದರ್ ವಲಿ, ಸಿ.ವೀರಭದ್ರಪ್ಪ, ಮನ್ಸೂರ್ ಹುಸೇನ್, ಸಿರಾಜ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.