ADVERTISEMENT

ಕಾವೇರಿ ವಿವಾದ | ಕೇಂದ್ರ ಸರ್ಕಾರ ತಕ್ಷಣ ರಾಜ್ಯಗಳ ಸಭೆ ಕರೆಯಲಿ: ವಿ.ಎಸ್.ಉಗ್ರಪ್ಪ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2023, 9:45 IST
Last Updated 23 ಸೆಪ್ಟೆಂಬರ್ 2023, 9:45 IST
ವಿ.ಎಸ್.ಉಗ್ರಪ್ಪ
ವಿ.ಎಸ್.ಉಗ್ರಪ್ಪ   

ಹೊಸಪೇಟೆ (ವಿಜಯನಗರ): ಸಂಕಷ್ಟದ ಸಮಯದಲ್ಲಿ ತಮಿಳುನಾಡಿಗೆ ನೀರು ಬಿಡುವುದು ಕಷ್ಟ ಎಂಬುದು ಎಲ್ಲರಿಗೂ ಗೊತ್ತಿದ್ದರೂ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಗಳು ಕಣ್ಣುಮುಚ್ಚಿ ನಿರ್ಧಾರ ಕೈಗೊಂಡಿವೆ. ಕೇಂದ್ರ ಸರ್ಕಾರ ತಕ್ಷಣ ರಾಜ್ಯಗಳ ಸಭೆ ಕರೆದು ಬಿಕ್ಕಟ್ಟು ಶಮನಕ್ಕೆ ಯತ್ನಿಸಬೇಕು ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಒತ್ತಾಯಿಸಿದರು.

‘ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿಗಳಲ್ಲಿ ತಲಾ 9 ಮಂದಿ ಇದ್ದಾರೆ, ಅಧ್ಯಕ್ಷರು ಮತ್ತು ನಾಲ್ವರು ನಾಮನಿರ್ದೇಶಿತರನ್ನು ನೇಮಕ ಮಾಡುವುದು ಕೇಂದ್ರ ಸರ್ಕಾರ. ಕೇಂದ್ರ ನೇಮಕ ಮಾಡಿದವರೇ ಬಹುಸಂಖ್ಯೆಯಲ್ಲಿ ಇರುವುದರಿಂದ ಅವರಿಂದಲೇ ರಾಜ್ಯದ ಹಿತಾಸಕ್ತಿ ಕಡೆಗಣಿಸಿ ನೀರು ಬಿಡಲು ಆದೇಶ ಬಂದಿದೆ. ಕರ್ನಾಟಕದಲ್ಲಿ ತೀವ್ರವಾಗಿ ನೀರಿನ ಸಮಸ್ಯೆ ಇರುವುದರಿಂದ ಕೇಂದ್ರ ಸರ್ಕಾರವೇ ಇದೀಗ ನಾಲ್ಕೂ ರಾಜ್ಯಗಳ ಸಭೆ ಕರೆದು ಮನವರಿಕೆ ಮಾಡುವ ಕೆಲಸ ಮಾಡಬೇಕು’ ಎಂದು ಅವರು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾವೇರಿ ನೀರು ಹರಿಸುವುದಾಗಿ ಪ್ರಾಧಿಕಾರಕ್ಕೆ ಮಾತು ಕೊಟ್ಟ ರಾಜ್ಯ ಸರ್ಕಾರ ಈಗ ಕೇಂದ್ರದ ಮೇಲೆ ಬೆಟ್ಟುಮಾಡುವುದು ಸರಿಯಲ್ಲ ಎಂಬ ಸಂಸದ ಪ್ರಲ್ಹಾದ ಜೋಷಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಅವರು ಈ ವಿಷಯ ತಿಳಿಸಿದರು.

ADVERTISEMENT

ರಾಜ್ಯದಲ್ಲಿ ಬರಗಾಲದಿಂದಾಗಿ ₹30,432 ಕೋಟಿ ಮೌಲ್ಯದ ಬೆಳೆ ಹಾನಿ ಆಗಿದ್ದು, ಎನ್‌ಡಿಆರ್‌ಎಫ್‌ ನಿಯಮದಂತೆ ತಕ್ಷಣದ ಬರ ಪರಿಹಾರ ರೂಪದಲ್ಲಿ ಕೇಂದ್ರದಿಂದ ₹ 4,860 ಕೋಟಿ ಬರಬೇಕಾಗುತ್ತದೆ. ಕೇಂದ್ರವು ತಕ್ಷಣ ಈ ಹಣವನ್ನು ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.