ADVERTISEMENT

ರಾಹುಲ್‌ ಗಾಂಧಿ ಸದಸ್ಯತ್ವ ರದ್ದು; ಕಾಂಗ್ರೆಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 14:35 IST
Last Updated 29 ಮಾರ್ಚ್ 2023, 14:35 IST
ಕಾಂಗ್ರೆಸ್‌ ಕಾರ್ಯಕರ್ತರು ಹೊಸಪೇಟೆಯ ಮಹಾತ್ಮ ಗಾಂಧಿ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು
ಕಾಂಗ್ರೆಸ್‌ ಕಾರ್ಯಕರ್ತರು ಹೊಸಪೇಟೆಯ ಮಹಾತ್ಮ ಗಾಂಧಿ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು   

ಹೊಸಪೇಟೆ (ವಿಜಯನಗರ): ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿಯವರ ಲೋಕಸಭಾ ಸದಸ್ಯತ್ವ ರದ್ದುಗೊಳಿಸಿ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಪಕ್ಷದ ಕಾರ್ಯಕರ್ತರು ಬುಧವಾರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ದೇಶದಲ್ಲಿ ನಡೆಯುತ್ತಿರುವ ಹಗರಣಗಳ ಬಗ್ಗೆ ರಾಹುಲ್‌ ಗಾಂಧಿಯವರು ಪ್ರಶ್ನಿಸುತ್ತಿದ್ದಾರೆ. ಇದರಿಂದ ಕೆರಳಿದ ಬಿಜೆಪಿಯ ಕೇಂದ್ರ ಸರ್ಕಾರ ಅವರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ. ರಾಜಕೀಯ ರ್‍ಯಾಲಿಯೊಂದರಲ್ಲಿ ರಾಹುಲ್‌ ಗಾಂಧಿಯವರು ಮಾತನಾಡಿದ ವಿಷಯವನ್ನೇ ದೊಡ್ಡದಾಗಿ ಮಾಡುತ್ತಿದೆ. ಯಾವುದೇ ತಪ್ಪು ಮಾಡದ ರಾಹುಲ್‌ ಗಾಂಧಿಯವರ ಲೋಕಸಭಾ ಸದಸ್ಯತ್ವ ರದ್ದುಗೊಳಿಸಿ, ಎಂಟು ವರ್ಷ ಚುನಾವಣೆಗೆ ನಿಲ್ಲದಂತೆ ಕ್ರಮ ಕೈಗೊಳ್ಳಲಾಗಿದೆ. ಆದರೆ, ನ್ಯಾಯಾಲಯದಲ್ಲಿ ಅವರಿಗೆ ನ್ಯಾಯ ಸಿಗುವ ಭರವಸೆ ಇದೆ. ಇಡೀ ಪಕ್ಷದ ಕಾರ್ಯಕರ್ತರು ರಾಹುಲ್‌ ಗಾಂಧಿಯವರ ಬೆನ್ನಿಗಿದ್ದಾರೆ ಎಂದು ಮುಖಂಡರು ಹೇಳಿದರು.

ಕೇಂದ್ರ ಸರ್ಕಾರದ ವಿರುದ್ಧ ಹಾಗೂ ರಾಹುಲ್‌ ಗಾಂಧಿ ಪರ ಘೋಷಣೆಗಳನ್ನು ಕೂಗಿದರು. ವಿಜಯನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಆರ್‌. ಗವಿಯಪ್ಪ, ಮುಖಂಡರಾದ ಕೊಡಗಿನಹಾಳ ಹುಲುಗಪ್ಪ, ಮಲ್ಲಿಕಾರ್ಜುನ, ವಿಜಯಕುಮಾರ್‌, ಮಂಜುನಾಥ್‌, ಭರತ್‌, ಯೋಗಲಕ್ಷ್ಮಿ, ನಗರಸಭೆ ಸದಸ್ಯರಾದ ಕೆ. ಮಹೇಶ್‌, ರಾಘವೇಂದ್ರ, ಕೆ. ಗೌಸ್‌, ಸೈಯ್ಯದ್‌ ಮಹಮ್ಮದ್‌, ಡಿ. ವೆಂಕಟರಮಣ, ಕುಬೇರ್‌ ದಲ್ಲಾಲಿ ಇತರರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.