ADVERTISEMENT

ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 11:07 IST
Last Updated 3 ಸೆಪ್ಟೆಂಬರ್ 2021, 11:07 IST
ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಕಾರ್ಯಕರ್ತರು ಶುಕ್ರವಾರ ಹೊಸಪೇಟೆ ಕಾರ್ಮಿಕ ಇಲಾಖೆಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಕಾರ್ಯಕರ್ತರು ಶುಕ್ರವಾರ ಹೊಸಪೇಟೆ ಕಾರ್ಮಿಕ ಇಲಾಖೆಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಹೊಸಪೇಟೆ(ವಿಜಯನಗರ): ಕಟ್ಟಡ ನಿರ್ಮಾಣ ಹಾಗೂ ವಲಸೆ ಕಾರ್ಮಿಕರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಹಮ್ಮಿಕೊಂಡಿರುವ ಕೋವಿಡ್ ಲಸಿಕಾಕರಣ ಕಾರ್ಯಕ್ರಮ ರದ್ದುಗೊಳಿಸುವಂತೆ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಒತ್ತಾಯಿಸಿದೆ.

ಶುಕ್ರವಾರ ನಗರದ ಕಾರ್ಮಿಕ ಇಲಾಖೆಯ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘದ ಕಾರ್ಯಕರ್ತರು ಕಾರ್ಮಿಕ ಇಲಾಖೆ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಖಾಸಗಿ ಆಸ್ಪತ್ರೆಗಳ ಮಾಲೀಕರೊಂದಿಗೆ ಕಾರ್ಮಿಕ ಆಯುಕ್ತರು ಸಭೆ ನಡೆಸಿ ಪ್ರತಿ ಲಸಿಕೆಗೆ ₹780 ದರದಲ್ಲಿ ರಾಜ್ಯದ 30 ಲಕ್ಷ ನೋಂದಾಯಿತ ಕಾರ್ಮಿಕರಿಗೆ ಮತ್ತು 10 ಲಕ್ಷ ವಲಸೆ ಕಾರ್ಮಿಕರಿಗೆ ಲಸಿಕೆ ನೀಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಖಾಸಗಿ ಆಸ್ಪತ್ರೆ ಮೂಲಕ ಲಸಿಕಾಕರಣ ನಡೆಸಿದರೆ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಸುಮಾರು ₹624 ಕೋಟಿ ಹಣ ನಿರಾಯಾಸವಾಗಿ ಖಾಸಗಿ ಆಸ್ಪತ್ರೆಗಳ ಪಾಲಾಗಲಿದೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ಮಂಡಳಿಯ ನಿಧಿಯನ್ನು ಖಾಲಿ ಮಾಡುವ ಹುನ್ನಾರ ಇದಾಗಿದ್ದು, ಕಾರ್ಮಿಕರ ಕಲ್ಯಾಣಕ್ಕಾಗಿ ನಿಗದಿಗೊಳಿಸಿರುವ ನಿಧಿಯ ಹಣವನ್ನು ಲಸಿಕೆ ಹೆಸರಲ್ಲಿ ದುರ್ಬಳಕೆ ಮಾಡುವ ಪ್ರಯತ್ನ ಸುಪ್ರೀಂಕೋರ್ಟ್ ಹಾಗೂ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಕೂಡಲೇ ಈ ತೀರ್ಮಾನ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈಗಾಗಲೆ ಪಡಿತರ, ಟೂಲ್, ಸುರಕ್ಷಾ ಮತ್ತು ಆರೋಗ್ಯ ಕಿಟ್ ವಿತರಣೆ, ಸಾಫ್ಟ್‌ವೇರ್ ಆಳವಡಿಕೆ ಹೆಸರಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಆರೋಪವಿದೆ. ಅದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಕಟ್ಟಡ ಕಾರ್ಮಿಕ ಸಂಘಟನೆಯ ಜಿಲ್ಲಾ ಘಟಕದ ಎನ್.ಯಲ್ಲಾಲಿಂಗ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಗೋಪಾಲ, ಕಾರ್ಯದರ್ಶಿ ಕೆ.ರಾಮಾಂಜಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.