ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಹೊಳಲು ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ವಾಯು ವಿಹಾರಕ್ಕೆ ತೆರಳಿದ್ದ, ಈ ಮೊದಲು ಚಿನ್ನಾಭರಣ ವ್ಯಾಪಾರಿಯಾಗಿದ್ದ ಮಂಜುನಾಥ ಶೇಜವಾಡಕರ್ (58) ಎಂಬುವವರನ್ಹು ದುಷ್ಕರ್ಮಿಗಳು ಅಪಹರಿಸಿದ್ದು, ₹5 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ.
ಬೆಳಿಗ್ಗೆ ಮೈಲಾರ ರಸ್ತೆಯಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ಮಂಜುನಾಥ ಅವರು 8 ಗಂಟೆಯಾದರೂ ಮನೆಗೆ ಮರಳಿರಲಿಲ್ಲ. ಇದೇ ವೇಳೆ ಅಪಹರಣಕಾರರು ಮಂಜುನಾಥ ಅವರ ಮೊಬೈಲ್‌ನಿಂದಲೇ ದಾವಣಗೆರೆಯಲ್ಲಿ ವೈದ್ಯೆಯಾಗಿರುವ ಅವರ ಅಕ್ಕ ಮಂಜುಳಾ ಶೇಜವಾಡಕರ್ ಅವರಿಗೆ ವಾಟ್ಸ್‌ಆ್ಯಪ್ ಕರೆ ಮಾಡಿಸಿ ‘ವಾಕಿಂಗ್ ಹೋಗಿದ್ದ ನನ್ನನ್ನು ಕಾರಿನಲ್ಲಿ ಬಂದವರು ಅಪಹರಿಸಿ ಕಟ್ಟಿ ಹಾಕಿದ್ದಾರೆ. ₹5 ಕೋಟಿ ಕೊಡುವಂತೆ ಹೇಳುತ್ತಿದ್ದಾರೆ’ ಎಂದು ಹೇಳಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹೀಗೆ ಮಾತನಾಡುತ್ತಿದ್ದಾಗಲೇ ಅಪಹರಣಕಾರನೊಬ್ಬ ಪೋನ್ ಕಿತ್ತುಕೊಂಡು ‘ನಾವು ಕೇಳಿದಷ್ಟು ಹಣ ಬೇಗನೇ ನೀಡಬೇಕು. ನಮಗೂ ಇವರಿಗೂ ಯಾವುದೇ ದ್ವೇಷ ಇಲ್ಲ. ನಮಗೆ ಹಣ ಬೇಕು’ ಎಂದಿದ್ದಾನೆ. ಇದಕ್ಕೆ ಡಾ.ಮಂಜುಳಾ ಪ್ರತಿಕ್ರಿಯಿಸಿ, ಅಷ್ಟೊಂದು ಹಣ ನೀಡಲು ಆಗುವುದಿಲ್ಲ, ಒಂದು ಲಕ್ಷ ನೀಡಲು ಸಾಧ್ಯವಾಗಬಹುದು’ ಎಂದಿದ್ದಾರೆ. ಆಗ ಅಪಹರಣಕಾರ ‘ನಾವು ಕೇಳಿದಷ್ಟು ಹಣ ನೀಡದಿದ್ದರೆ ನಿಮ್ಮ ತಮ್ಮನ ಬಾಡಿಯೂ ಸಿಗುವುದಿಲ್ಲ’ ಎಂದು ಹೆದರಿಸಿದ್ದಾನೆ. ಈ ಆಡಿಯೋ ಸಂಭಾಷಣೆ ಜಾಲತಾಣದಲ್ಲಿ ಇದೀಗ ವ್ಯಾಪಕವಾಗಿ ಪ್ರಸಾರವಾಗಿದೆ.
ಮಂಜುನಾಥ ಅವರು ಕೆಲ ವರ್ಷಗಳಿಂದ ವ್ಯವಹಾರ ಬಿಟ್ಟು ವಿಶ್ರಾಂತಿ ಜೀವನ ನಡೆಸುತ್ತಿದ್ದರು. ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಂಡ ರಚಿಸಿ ವ್ಯಕ್ತಿಯನ್ನು ರಕ್ಷಿಸುವ ಕಾರ್ಯಾಚರಣೆ ಆರಂಭವಾಗಿದೆ.
ಎಸ್‌ಪಿ ಎಸ್.ಜಾಹ್ನವಿ ಶುಕ್ರವಾರ ರಾತ್ರಿ ಸ್ಥಳಕ್ಕೆ ಭೇಟಿ ನೀಡಿದ್ದು, ಮುಂದಿನ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.