
ಹರಪನಹಳ್ಳಿ: ‘ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್‌ನಿಂದ ಟಿಕೆಟ್‌ಗಾಗಿ ಸಾಕಷ್ಟು ಜನ ಆಕಾಂಕ್ಷಿಗಳಿದ್ದಾರೆ. ಅಭ್ಯರ್ಥಿ ಆಯ್ಕೆ ಅಂತಿಮವಾಗಿ ಹೈಕಮಾಂಡ್ ನಿರ್ಧರಿಸುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹಮ್ಮದ್ ಖಾನ್ ಹೇಳಿದರು.
ತಾಲ್ಲೂಕಿನ ತಾವರಗುಂದಿ ಗ್ರಾಮದ ಬಳಿ ತುಂಗಭದ್ರಾ ನದಿತೀರದಲ್ಲಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹಮ್ಮಿಕೊಂಡಿದ್ದ ‘ಜಾನಪದ ಸಂಕ್ರಾಂತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.‘
‘ಕಳೆದ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರೇ ನನ್ನದು ಇದು ಕೊನೆ ಚುನಾವಣೆ ಎಂದು ಹೇಳಿದ್ದರು. ಆ ಹಿನ್ನೆಲೆಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ’ ಎಂದರು.
‘ನವೆಂಬರ್, ಡಿಸೆಂಬರ್, ಸಂಕ್ರಾಂತಿ ಎಲ್ಲವೂ ಮುಗಿದಿದೆ. 2028ರವರೆಗೂ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಸಿದ್ದರಾಮಯ್ಯ ಅವರೇ ಬಜೆಟ್ ಮಂಡಿಸುತ್ತಾರೆ’ ಎಂದು ಹೇಳಿದರು.
‘ಎಂ.ಪಿ.ಪ್ರಕಾಶ್ ಅವರು ನವೆಂಬರ್‌ನಲ್ಲಿ ಹಂಪಿ ಉತ್ಸವ ಮಾಡುತ್ತಿದ್ದರು. ಆ ತಿಂಗಳಲ್ಲೇ ಉತ್ಸವ ಮಾಡಲು ಅವರ ಪುತ್ರಿ, ಶಾಸಕಿ ಎಂ.ಪಿ.ಲತಾ ಅವರು ಮನವಿ ಮಾಡಿದ್ದರು. ಕೋವಿಡ್ ಬಳಿಕ ಆ ಸಂಪ್ರದಾಯ ತಪ್ಪಿದೆ. ಈ ಬಾರಿ ಫೆ.13, 14 ಮತ್ತು 15ರಂದು ಉತ್ಸವ ಜರುಗಲಿದೆ. ಉತ್ಸವ ಮುಕ್ತಾಯ ಬಳಿಕ ಆ ಬಗ್ಗೆ ಚಿಂತಿಸಲಾಗುವುದು’ ಎಂದರು.
ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ಹೊನ್ನಾಳಿ ಶಾಸಕ ಡಿ.ಜೆ.ಶಾಂತನಗೌಡ, ಮುಖಂಡ ಎಚ್.ಎಂ.ಮಲ್ಲಿಕಾರ್ಜುನ, ಎಚ್.ಎಂ.ಗೌತಮ್ ಪ್ರಭು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.