ADVERTISEMENT

ಹೂವಿನಹಡಗಲಿ: ಕಾಣೆಯಾಗಿದ್ದ ರೈತನ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2022, 16:20 IST
Last Updated 6 ಫೆಬ್ರುವರಿ 2022, 16:20 IST
   

ಹೂವಿನಹಡಗಲಿ: ಪಟ್ಟಣದ ತಾಲ್ಲೂಕು ಕಚೇರಿ ಬಳಿಯಲ್ಲಿನ ತಮ್ಮ ತುಂಡು ಜಮೀನಿನ ಹಕ್ಕಿಗಾಗಿ ನಿರಂತರ ಹೋರಾಟ ನಡೆಸಿ, ವಾರದ ಹಿಂದೆ ಕಾಣೆಯಾಗಿದ್ದ ರೈತ ನಂದಿಹಳ್ಳಿ ಬಣಕಾರ ಮಲ್ಲಪ್ಪ (49)ನ ಶವ ಭಾನುವಾರ ಪತ್ತೆಯಾಗಿದೆ.

ತಾಲ್ಲೂಕು ಕಚೇರಿ ಹಿಂಭಾಗದ ತಮ್ಮ ಜಮೀನಿನ ಪಕ್ಕದ ಜಾಲಿಯ ಪೊದೆಯಲ್ಲಿ ಮಲ್ಲಪ್ಪನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪಕ್ಕದಲ್ಲಿ ವಿಷದ ಬಾಟಲಿ ದೊರೆತಿರುವುದರಿಂದ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

ರೈತ ಮಲ್ಲಪ್ಪ ತನ್ನ 2-22 ಎಕರೆ ಜಮೀನಿನ ಪೈಕಿ ಎರಡು ಎಕರೆಯನ್ನು 2006ರಲ್ಲಿ ಪಟ್ಟಣದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಮಾರಾಟ ಮಾಡಿದ್ದರು. ಆದರೆ, ಇಡೀ ವಿಸ್ತೀರ್ಣ ಭೂಸ್ವಾಧೀನ ಪ್ರಕ್ರಿಯೆಗೆ ಒಳಪಟ್ಟಿತ್ತು. 22 ಸೆಂಟ್ಸ್ ತುಂಡು ಭೂಮಿಯ ಭೂಸ್ವಾಧೀನ ರದ್ದುಪಡಿಸಿ, ತಮ್ಮ ಹಕ್ಕಿಗೆ ಒಪ್ಪಿಸುವಂತೆ ಸುದೀರ್ಘ ಹೋರಾಟ ನಡೆಸಿದ್ದರು.

ADVERTISEMENT

ಕಾನೂನು ಬಾಹಿರ ಭೂಸ್ವಾಧೀನ, ಅಕ್ರಮ ವಸತಿ ವಿನ್ಯಾಸದಿಂದ ತಮಗೆ ಅನ್ಯಾಯವಾಗಿದೆ ಎಂದು ಮಲ್ಲಪ್ಪ ಈಚೆಗೆ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಜ. 30 ರಂದು ಅವರು ಕಾಣೆಯಾಗಿದ್ದರು.

‘ಜ. 4ರಂದು ವಿವಾದಿತ ತುಂಡು ಜಮೀನು ಸರ್ವೇ ಮಾಡುವ ಸಂದರ್ಭದಲ್ಲಿ ಕೆಲವರು ಬೆದರಿಕೆ ಹಾಕಿದ್ದರು. ಕಾಣೆಯಾಗಿದ್ದ ಪತಿ ಶವವಾಗಿ ದೊರೆತಿದ್ದು, ಅವರ ಸಾವಿನ ಬಗ್ಗೆ ಅನುಮಾನಗಳಿರುವುದರಿಂದ ತನಿಖೆ ನಡೆಸುವಂತೆ ಕೋರಿ ಮೃತ ಮಲ್ಲಪ್ಪನ ಪತ್ನಿ ಸರಸ್ವತಿ ದೂರು ನೀಡಿದ್ದಾರೆ. ಪಟ್ಟಣ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.