ADVERTISEMENT

ಹೂವಿನಹಡಗಲಿ: ಸರ್ಕಾರಿ ಕಾಲೇಜಿಗೆ ಭಾರಿ ಬೇಡಿಕೆ

ಹೂವಿನಹಡಗಲಿ ಎಸ್.ಆರ್.ಎಂ.ಪಿ.ಪಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನತ್ತ ಗ್ರಾಮೀಣರು

ಕೆ.ಸೋಮಶೇಖರ
Published 14 ಜನವರಿ 2022, 7:50 IST
Last Updated 14 ಜನವರಿ 2022, 7:50 IST
ಹೂವಿನಹಡಗಲಿ ಎಸ್ಆರ್ ಎಂಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಹೂವಿನಹಡಗಲಿ ಎಸ್ಆರ್ ಎಂಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು   

ಹೂವಿನಹಡಗಲಿ: ಇಲ್ಲಿನ ಶ್ರೀಮತಿ ರುದ್ರಾಂಬ ಎಂ.ಪಿ.ಪ್ರಕಾಶ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರವೇಶಾತಿಗೆ ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚಿನ ಒಲವು ತೋರುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಕಾಲೇಜಿನ ಎಲ್ಲ ವಿಭಾಗಗಳು ತುಂಬಿವೆ.

ನಾನಾ ಕಾರಣದಿಂದ ಕೆಲ ವರ್ಷಗಳ ಹಿಂದೆ ಸರ್ಕಾರಿ ಕಾಲೇಜುಗಳೆಂದರೆ ಪೋಷಕರು, ವಿದ್ಯಾರ್ಥಿಗಳು ಮೂಗು ಮುರಿಯುತ್ತಿದ್ದರು. ಆದರೆ, ಈಗ ಸರ್ಕಾರಿ ಕಾಲೇಜು ಪ್ರವೇಶಕ್ಕೆ ಪೈಪೋಟಿ ಶುರುವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಲ್ಲ ವಿಭಾಗಗಳ ಪ್ರವೇಶಗಳು ಭರ್ತಿಯಾಗುತ್ತಿವೆ.

ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರು ಗ್ರಾಮೀಣ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 2007ರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಿಸಿದ್ದರು. ಅವರ ಹೆಸರು ಚಿರಸ್ಥಾಯಿಯಾಗಿಸಲು ಕುಟುಂಬ ವರ್ಗದವರು ಕಾಲೇಜಿಗೆ ಭೂದಾನ ಮಾಡಿದ್ದರು. ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಅವರು ₹18 ಕೋಟಿಗೂ ಹೆಚ್ಚು ಅನುದಾನ ಮಂಜೂರು ಮಾಡಿಸಿ, ಮೂಲ ಸೌಕರ್ಯ ಕಲ್ಪಿಸಿದ್ದಾರೆ.

ADVERTISEMENT

ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ 36 ಕೊಠಡಿಗಳನ್ನು ನಿರ್ಮಿಸಲಾಗಿದೆ. ಭೌತಶಾಸ್ತ್ರ, ರಸಾಯನ ಶಾಸ್ತ್ರ, ಕಂಪ್ಯೂಟರ್ ವಿಭಾಗಕ್ಕೆ ಪ್ರತ್ಯೇಕ ಪ್ರಯೋಗಾಲಯ ಸೌಲಭ್ಯವಿದೆ. ಗ್ರಂಥಾಲಯ, ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ, ಉಚಿತ ವೈ ಫೈ ಸೇರಿದಂತೆ ಸೌಕರ್ಯಗಳಿವೆ. 12 ಜನ ಕಾಯಂ ಬೋಧಕ, 60 ಜನ ಅತಿಥಿ ಉಪನ್ಯಾಸಕರು ಇದ್ದಾರೆ. ಹೊಸದಾಗಿ ಆಡಿಟೋರಿಯಂ, ವಿದ್ಯಾರ್ಥಿ ನಿಲಯ ನಿರ್ಮಾಣವಾಗಿದೆ. ಕ್ಯಾಂಟೀನ್ ನಿರ್ಮಾಣಕ್ಕೂ ಅನುದಾನ ಮಂಜೂರಾಗಿದೆ. ಹೀಗೆ ಸಕಲ ಸವಲತ್ತು ಇರುವುದರಿಂದ ಎಲ್ಲರನ್ನೂ ಆಕರ್ಷಿಸುತ್ತಿದೆ.

2007ರಲ್ಲಿ 78 ವಿದ್ಯಾರ್ಥಿಗಳಿಂದ ಆರಂಭವಾಗಿದ್ದ ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಈ ವರ್ಷ 2197 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

ಕಳೆದ ಎರಡು ವರ್ಷದಿಂದ ಕೋವಿಡ್‌ನಿಂದಾಗಿ ಬಡ, ಮಧ್ಯಮ ವರ್ಗದ ಕುಟುಂಬಗಳಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ಖಾಸಗಿ ಕಾಲೇಜುಗಳಲ್ಲಿ ದುಬಾರಿ ಶುಲ್ಕ ಭರಿಸುವುದು ಬಡವರಿಗೆ ಹೊರೆಯಾಗಿದೆ. ಗ್ರಾಮೀಣ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳತ್ತ ಮುಖ ಮಾಡುತ್ತಿದ್ದಾರೆ.

ಉಚಿತವಾಗಿ ಟ್ಯಾಬ್, ಸಂಚಿ ಹೊನ್ನಮ್ಮ, ಸಿ.ವಿ.ರಾಮನ್, ವಿದ್ಯಾಸಿರಿ ವಿದ್ಯಾರ್ಥಿ ವೇತನ ಸೌಲಭ್ಯಗಳು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ. ದುಬಾರಿ ಶುಲ್ಕ ಪಾವತಿಸಲಾಗದೇ ಶಿಕ್ಷಣ ಮೊಟಕುಗೊಳಿಸುತ್ತಿದ್ದ ವಿದ್ಯಾರ್ಥಿಗಳ ಪಾಲಿಗೆ ಈ ಸರ್ಕಾರಿ ಪದವಿ ಕಾಲೇಜು ಈಗ ಆಶಾಕಿರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.