ADVERTISEMENT

ಹೊಸಪೇಟೆಯಲ್ಲಿ ಡೆಂಗಿ ಶಂಕೆ: 7ನೇ ತರಗತಿ ವಿದ್ಯಾರ್ಥಿನಿ ಸಾವು

Class 7 girl died in Hosapete;

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2023, 5:49 IST
Last Updated 20 ಸೆಪ್ಟೆಂಬರ್ 2023, 5:49 IST
<div class="paragraphs"><p>ಜಾಹ್ನವಿ</p></div>

ಜಾಹ್ನವಿ

   

ಹೊಸಪೇಟೆ (ವಿಜಯನಗರ): ನಗರದ ವಿಜ್ಞಾನ ಇ ಟೆಕ್ನೊ ಸ್ಕೂಲ್‌ನ 7ನೇ ತರಗತಿ ವಿದ್ಯಾರ್ಥಿನಿ ಜಾಹ್ನವಿ ಎನ್‌. (12) ತೀವ್ರ ಅಸೌಖ್ಯದಿಂದ ಮಂಗಳವಾರ ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಆಕೆಗೆ ಡೆಂಗಿ ಬಾಧಿಸಿರುವ ಶಂಕೆ ವ್ಯಕ್ತವಾಗಿದೆ.

‘ಬಾಲಕಿ ಡೆಂಗಿಯಿಂದಲೇ ಮೃತಪಟ್ಟಿದ್ದಾಳೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಆಕೆಯ ಮನೆಯ ಸುತ್ತಮುತ್ತಲಿನ ಪರಿಸರವನ್ನು ಅಧ್ಯಯನ ಮಾಡಿ, ಡೆಂಗಿಗೆ ಕಾರಣವಾಗುವ ಸೊಳ್ಳೆಗಳು ಇವೆಯೇ ಎಂಬುದನ್ನು ದೃಢಪಡಿಸಲು ತಂಡವನ್ನು ಕಳುಹಿಸಲಾಗಿದೆ. ಸಾವಿಗೆ ನಿಖರ ಕಾರಣವನ್ನು ಶೀಘ್ರವೇ ತಿಳಿಯುವ ವಿಶ್ವಾಸ ಇದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಂಕರ್ ನಾಯ್ಕ್‌ ‘ಪ್ರಜಾವಾಣಿ‘ಗೆ ತಿಳಿಸಿದರು.

ADVERTISEMENT

‘ವಿದ್ಯಾರ್ಥಿನಿಯ ತಂದೆ ಲ್ಯಾಬ್‌ ಟೆಕ್ನಿಶಿಯನ್‌. ಮನೆಯಲ್ಲಿ ಮೊದಲಿಗೆ ಚಿಕಿತ್ಸೆ ಮಾಡಿಕೊಂಡಿದ್ದಾರೋ ಎಂಬ ಬಗ್ಗೆ ತಿಳಿಯಬೇಕಿದೆ. ವಿದ್ಯಾರ್ಥಿನಿಗೆ ಒಮ್ಮಿಂದೊಮ್ಮೆಲೆ ತೀವ್ರ ಅಸೌಖ್ಯ ಕಾಡಿದೆ. ಆಕೆಯ ಕಾಯಿಲೆಯ ಲಕ್ಷಣ ತಿಳಿದುಬಂದರೆ ಮುಂದಿನ ಎಚ್ಚರಿಕೆ ಕ್ರಮ ವಹಿಸಲು ಅನುಕೂಲವಾಗುತ್ತದೆ. ಹೀಗಾಗಿ ಯಾವ ಕಾಯಿಲೆಯಿಂದ ಮೃತಪಟ್ಟಳು ಎಂಬುದನ್ನು ತಿಳಿಯುವ ಪ್ರಯತ್ನ ಸಾಗಿದೆ’ ಎಂದು ಅವರು ಹೇಳಿದರು.

ನಗರದ ಟಿ.ಟಿ.ಡ್ಯಾಂ ಪ್ರದೇಶದಲ್ಲಿ ವಾಸವಿರುವ ತಿರುಮಲೇಶ್‌–ರೇಣುಕಾ ದಂಪತಿಯ ಪುತ್ರಿ ಜಾಹ್ನವಿ ಅವರು ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದರು. ಇದೇ 18ರಂದು ಏಕಾಏಕಿ ಅನಾರೋಗ್ಯಕ್ಕೀಡಾದ ಆಕೆಯನ್ನು ಮೊದಲಿಗೆ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತಾಗಿ ಹೆಚ್ಚಿನ ಚಿಕಿತ್ಸೆಯ ಅಗತ್ಯ ಇದೆ ಎಂದು ವೈದ್ಯರು ತಿಳಿಸಿದ್ದರಿಂದ ದಾವಣಗೆರೆಗೆ ಕರೆದೊಯ್ಯಲಾಗಿತ್ತು. ಆದರೆ ಮಂಗಳವಾರ ರಾತ್ರಿ ಮೃತಪಟ್ಟರು.

ಶಾಲೆಗೆ ರಜೆ: ತರಗತಿಯಲ್ಲಿ ಟಾಪರ್ ಆಗಿದ್ದ ಜಾಹ್ನವಿ ಅವರ ಸಾವಿಗೆ ಶಾಲೆ ಕಂಬನಿ ಮಿಡಿದಿದ್ದು, ಬುಧವಾರ ಮಧ್ಯಾಹ್ನದವರೆಗೆ ಶಾಲೆಗೆ ರಜೆ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.