ADVERTISEMENT

ಕೋವಿಡ್ ಭಯ ಬೇಡ, ಮುಂಜಾಗ್ರತೆ ಇರಲಿ: ಡಿ. ಕಾಂಚನ

​ಪ್ರಜಾವಾಣಿ ವಾರ್ತೆ
Published 4 ಮೇ 2021, 6:38 IST
Last Updated 4 ಮೇ 2021, 6:38 IST
ಡಿ. ಕಾಂಚನ
ಡಿ. ಕಾಂಚನ   

ಮರಿಯಮ್ಮನಹಳ್ಳಿ (ಹೊಸಪೇಟೆ ತಾಲ್ಲೂಕು): ‘ಈ ಸಾಂಕ್ರಾಮಿಕ ರೋಗ ಯಾರಿಗೂ ಬಾರದಿರಲಿ. ಬಂದರೂ ಸಹ ವೈದ್ಯರು ನೀಡುವ ಸಲಹೆ ಹಾಗೂ ಔಷಧವನ್ನು ತಪ್ಪದೇ ಪಡೆಯಿರಿ. ಯಾರು ಸಹ ಮಾನಸಿಕ ಖಿನ್ನತೆಗೆ ಒಳಗಾಗಬಾರದು. ಕೋವಿಡ್‌ ಬಗ್ಗೆ ಭಯಪಡದೆ, ಮುಂಜಾಗ್ರತೆ ವಹಿಸಿ’

ಕೋವಿಡ್ ದೃಢಪಟ್ಟ ನಂತರ ಹೋಂ ಐಸೋಲೇಷನ್‍ನಲ್ಲಿರುವ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಲ್ಯಾಬ್‌ ಟೆಕ್ನಿಶಿಯನ್‌ ಡಿ. ಕಾಂಚನ ಅವರ ಮಾತುಗಳು.

ನಿತ್ಯ ನೂರಕ್ಕೂ ಹೆಚ್ಚು ಜನರಿಗೆ ಕೋವಿಡ್ ತಪಾಸಣೆ ಮಾಡುವ ಕಾಂಚನ ಅವರು ಎಂದೂ ಎದೆಗುಂದಿಲ್ಲ. ಹತ್ತು ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅವರು ಮೂರು ವರ್ಷದಿಂದ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ADVERTISEMENT

ಸಹಾಯಕರಿಲ್ಲದೇ ಇರುವುದರಿಂದ ಒಬ್ಬರೇ ನಿತ್ಯ ಸಾಮಾನ್ಯ ರೋಗಿಗಳ ರಕ್ತ ಪರೀಕ್ಷೆ, ಗಂಟಲು ದ್ರವ ಪರೀಕ್ಷೆ, ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡುತ್ತಾರೆ. ಎಲ್ಲರ ವಿವರವನ್ನು ಒಬ್ಬರೇ ದಾಖಲಿಸುತ್ತಾರೆ.

‘ನೋಡ್ರಿ ಕಳೆದ ವರ್ಷ ಕೋವಿಡ್ ಸೋಂಕು ಆವರಿಸಿಕೊಂಡಾಗ ಜನಸಾಮಾನ್ಯರಿಗೆ ಯಾವ ರೀತಿಯ ಭಯ ಕಾಡಿತ್ತೋ ಹಾಗೇ ನಮಗೂ ಸಹ ಕಾಡಿತ್ತು. ಧೈರ್ಯದಿಂದ ಪಿಪಿಇ ಕಿಟ್ ಧರಿಸಿ ನಿತ್ಯ ನೂರಾರು ಜನರ ಪರೀಕ್ಷೆ ಮಾಡುತ್ತಿರುವೆ. ಜನವರಿಯಲ್ಲಿ 700, ಫೆಬ್ರುವರಿಯಲ್ಲಿ 500 ಹಾಗೂ ಮಾರ್ಚ್ನಲ್ಲಿ 1,500ಕ್ಕೂ ಹೆಚ್ಚು ಜನರ ಪರೀಕ್ಷೆ ನಡೆಸಿರುವೆ’ ಎಂದು ಹೇಳಿದರು.

‘ಸಾರ್ವಜನಿಕರಿಂದ ನನಗೂ ಸೋಂಕು ತಗುಲಿರುವ ಸಾಧ್ಯತೆ ಇದೆ. ಅದಕ್ಕೆ ದೃತಿಗೆಟ್ಟಿಲ್ಲ. ವೈದ್ಯರ ಸಲಹೆಯಂತೆ ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆಯುತ್ತಿರುವೆ’ ಎಂದರು. ಇವರ ಪತಿ ಶ್ರೀನಿವಾಸ ಅವರು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಲ್ಯಾಬ್‌ ಟೆಕ್ನಿಶಿಯನ್‌ ಆಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.