ADVERTISEMENT

ಹೂವಿನಹಡಗಲಿ: ಇಟ್ಟಿಗಿ ರಸ್ತೆ ದೂಳಿಗೆ ಬೇಸತ್ತ ಜನ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 5:07 IST
Last Updated 11 ನವೆಂಬರ್ 2024, 5:07 IST
<div class="paragraphs"><p>ಹೂವಿನಹಡಗಲಿ ತಾಲ್ಲೂಕಿನ ಇಟ್ಟಿಗಿಯಲ್ಲಿ ಅಪೂರ್ಣಗೊಂಡಿರುವ ರಸ್ತೆಯಲ್ಲಿ ದೂಳು ತುಂಬಿರುವುದು</p></div>

ಹೂವಿನಹಡಗಲಿ ತಾಲ್ಲೂಕಿನ ಇಟ್ಟಿಗಿಯಲ್ಲಿ ಅಪೂರ್ಣಗೊಂಡಿರುವ ರಸ್ತೆಯಲ್ಲಿ ದೂಳು ತುಂಬಿರುವುದು

   

ಹೂವಿನಹಡಗಲಿ: ತಾಲ್ಲೂಕಿನ ಇಟ್ಟಿಗಿ ಗ್ರಾಮ ಪರಿಮಿತಿಯಲ್ಲಿ ಅರಭಾವಿ-ಚಳ್ಳಕೆರೆ ರಾಜ್ಯ ಹೆದ್ದಾರಿ ನಿರ್ಮಾಣ ಕಾಮಗಾರಿ ಕೆಲ ತಿಂಗಳಿಂದ ಸ್ಥಗಿತಗೊಂಡಿದೆ. ಇದರಿಂದ ದೂಳಿನ ಸಮಸ್ಯೆ ತೀವ್ರಗೊಂಡು, ಗ್ರಾಮದ ನಿವಾಸಿಗಳು, ಶಾಲಾ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಲೋಕೋಪಯೋಗಿ ಇಲಾಖೆ ಉಪ ವಿಭಾಗದಿಂದ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮ (ಎಸ್ಎಚ್‌ಡಿಪಿ) ಅಡಿ ಉತ್ತಂಗಿಯಿಂದ ಇಟ್ಟಿಗಿ ವರೆಗೆ 7 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ವರ್ಷದಿಂದ ಕಾಮಗಾರಿ ಕುಂಟುತ್ತಾ ಸಾಗಿದ್ದು, ಟೆಂಡರ್ ಕಾಲಾವಧಿ ಮುಗಿದು ಆರು ತಿಂಗಳಾ ದರೂ ಕಾಮಗಾರಿ ಪೂರ್ಣಗೊಂಡಿಲ್ಲ.

ADVERTISEMENT

‘ಉತ್ತಂಗಿಯಿಂದ ಇಟ್ಟಿಗಿ ಪ್ಲಾಟ್‌ ವರೆಗೆ ಡಾಂಬರ್‌ ರಸ್ತೆ ನಿರ್ಮಿಸಿದ್ದು, ಪ್ಲಾಟ್‌ನಿಂದ ಇಟ್ಟಿಗಿವರೆಗೆ 2 ಕಿ.ಮೀ ಕಾಮಗಾರಿ ಅಪೂರ್ಣಗೊಂಡಿದೆ. ಗ್ರಾಮ ಪರಿಮಿತಿಯಲ್ಲಿ ರಸ್ತೆಯನ್ನು ಅಗೆದು, ಜಲ್ಲಿಕಲ್ಲು, ಗ್ರಾವೆಲ್ ಸುರಿದು ಎರಡು ತಿಂಗಳಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಇದರಿಂದ ದೂಳಿನ ಸಮಸ್ಯೆ ಉಂಟಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ’ ಎಂದು ಗ್ರಾಮಸ್ಥರು ದೂರಿದ್ದಾರೆ.

ಇದು ರಾಜ್ಯ ಹೆದ್ದಾರಿ ಆಗಿರುವುದ ರಿಂದ ವಾಹನಗಳು ನಿರಂತರವಾಗಿ ಓಡಾಡುತ್ತವೆ. ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಇಲ್ಲಿ ಯಾವುದೇ ವಾಹನ ತೆರಳಿದರೂ ದೂಳು ಮುಗಿಲೆತ್ತರಕ್ಕೆ ಚಿಮ್ಮುತ್ತದೆ. ವಾಹನದ ಹಿಂದೆ ಸಾಗುವ ಬೈಕ್ ಸವಾರರು, ಪಾದಾಚಾರಿ ಗಳು ದೂಳಿನಲ್ಲಿ ಲೀನವಾಗಿ ಅವರ ಬಣ್ಣವೇ ಬದಲಾಗುತ್ತದೆ. ರಸ್ತೆ ಸಮೀಪ ವಾಸಿಸುವ ಜನರ ಪಾಡು ಹೇಳತೀರದಾಗಿದೆ.

‘ಈ ಮಾರ್ಗದಲ್ಲಿ ಮೂರು ಶಾಲೆಗಳು, ಒಂದು ಪದವಿ ಪೂರ್ವ ಕಾಲೇಜು ಇದೆ. ನಡೆದು ಕೊಂಡು ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಸೈಕಲ್‌ನಲ್ಲಿ ತೆರಳು ವವರು ತೊಂದರೆ ಅನುಭವಿಸುತ್ತಿದ್ದಾರೆ. ‘ವಾಹನಗಳು ವೇಗವಾಗಿ ಹೋಗುವಾಗ ರಸ್ತೆಯಲ್ಲಿ ಸುರಿದ ಜಲ್ಲಿ ಕಲ್ಲುಗಳು ಸಿಡಿದು ಪಾದಾಚಾರಿಗಳು ಗಾಯಗೊಂಡಿದ್ದಾರೆ. ವಾಯು ವಿಹಾರಕ್ಕೆ ಬರುವ ಹಿರಿಯ ನಾಗರಿಕರು ಉಸಿರಾಟ ಸಮಸ್ಯೆಯಿಂದ ಬಳಲುವಂತಾಗಿದೆ. ದೂಳಿನಿಂದ ಇಷ್ಟೆಲ್ಲ ಅವಾಂತರ ಸೃಷ್ಟಿಯಾಗಿದ್ದರೂ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸುತ್ತಿಲ್ಲ’ ಎಂದು ಗ್ರಾಮದ ಯುವಕ ಐಗೋಳ ಬನ್ನೆಪ್ಪ ದೂರಿದ್ದಾರೆ.

‘ಕಾಮಗಾರಿ ಆರಂಭವಾದ ಕೆಲ ದಿನಗಳು ಮಾತ್ರ ರಸ್ತೆಗೆ ನೀರು ಸಿಂಪಡಿಸುತ್ತಿದ್ದರು. ತಿಂಗಳಿಂದ ನೀರು ಸಿಂಪಡಿಸದೇ ಇರುವುದರಿಂದ ದೂಳಿನ ಸಮಸ್ಯೆ ತೀವ್ರವಾಗಿದೆ. ಬಾಕಿ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅಲ್ಲಿಯವರೆಗೆ ದೂಳು ನಿವಾರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮಳೆಯ ಕಾರಣದಿಂದ ಗುತ್ತಿಗೆದಾರರು ಕೆಲಸ ಸ್ಥಗಿತಗೊಳಿಸಿದ್ದಾರೆ. ತಿಂಗಳೊಳಗೆ ಇಟ್ಟಿಗಿ ಗ್ರಾಮ ಪರಿಮಿತಿಯಲ್ಲಿ ರಸ್ತೆ ಕಾಮಗಾರಿ ಮುಗಿಸುತ್ತೇವೆ
ಜಾವೀದ್ ಬಾಷಾ, ಪ್ರಭಾರ ಎಇಇ, ಪಿಡಬ್ಲೂಡಿ, ಹಡಗಲಿ
ರಸ್ತೆ ಅಪೂರ್ಣ ಆಗಿರುವುದರಿಂದ ದೂಳಿನ ಸಮಸ್ಯೆ ತೀವ್ರವಾಗಿದೆ. ಅಧಿಕಾರಿಗಳು ಗಮನಹರಿಸದಿದ್ದರೆ ರಾಜ್ಯ ಹೆದ್ದಾರಿ ಬಂದ್ ಮಾಡಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಾರೆ
ಐಗೋಳ ಬನ್ನೆಪ್ಪ, ಇಟ್ಟಿಗಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.