ADVERTISEMENT

ಇನ್ನು ಮನೆಯಲ್ಲೇ ಕುಳಿತು ಇ–ಖಾತಾ: ಶಾಸಕ ಎಚ್.ಆರ್‌. ಗವಿಯಪ್ಪ

ಸೌಲಭ್ಯ ಸದ್ಬಳಕೆ ಮಾಡಲು ಶಾಸಕ, ಪೌರಾಯುಕ್ತರ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 5:36 IST
Last Updated 3 ಜನವರಿ 2026, 5:36 IST
ಮನೆಯಲ್ಲೇ ಕುಳಿತು ಇ–ಖಾತಾ ಪಡೆದುಕೊಳ್ಳುವ ಸಂಬಂಧ ಹೊರತರಲಾದ ಕರಪತ್ರವನ್ನು ಶಾಸಕ ಎಚ್.ಆರ್.ಗವಿಯಪ್ಪ ಮತ್ತು ನಗರಸಭೆ ಪೌರಾಯುಕ್ತ ಎ.ಶಿವಕುಮಾರ್ ಹೊಸಪೇಟೆಯಲ್ಲಿ ಶುಕ್ರವಾರ ಪ್ರದರ್ಶಿಸಿದರು
ಮನೆಯಲ್ಲೇ ಕುಳಿತು ಇ–ಖಾತಾ ಪಡೆದುಕೊಳ್ಳುವ ಸಂಬಂಧ ಹೊರತರಲಾದ ಕರಪತ್ರವನ್ನು ಶಾಸಕ ಎಚ್.ಆರ್.ಗವಿಯಪ್ಪ ಮತ್ತು ನಗರಸಭೆ ಪೌರಾಯುಕ್ತ ಎ.ಶಿವಕುಮಾರ್ ಹೊಸಪೇಟೆಯಲ್ಲಿ ಶುಕ್ರವಾರ ಪ್ರದರ್ಶಿಸಿದರು   

ಹೊಸಪೇಟೆ (ವಿಜಯನಗರ): ‘ಹೊಸಪೇಟೆ ನಗರದಲ್ಲಿ 34,184 ಆಸ್ತಿಗಳಿಗೆ ಇ–ಖಾತಾ ಮಾಡಿಸುವುದು ಬಾಕಿ ಇದೆ, ಇನ್ನು ಮುಂದೆ ಸಾರ್ವಜನಿಕರು ನಗರಸಭೆಗೆ ಬರುವ ಅಗತ್ಯವಿಲ್ಲ. ಮನೆಯಿಂದಲೇ ಅರ್ಜಿ ಸಲ್ಲಿಸಿ ಇ–ಖಾತೆ ಪಡೆಯಬಹುದು’ ಎಂದು ಶಾಸಕ ಎಚ್.ಆರ್‌. ಗವಿಯಪ್ಪ ಹೇಳಿದರು.

ಇಲ್ಲಿನ ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಸ್ತಿ ಕಣಜದಲ್ಲಿನ ಮಾಹಿತಿ ಆಧಾರದಲ್ಲಿ ಕರಡು ಇ–ಖಾತಾ ಪ್ರಕಟಿಸಲಾಗಿದ್ದು, ಸಾರ್ವಜನಿಕರು ಇದನ್ನು ನೇರವಾಗಿ ವೀಕ್ಷಿಸಬಹುದು. ಮನೆಯಿಂದ ಅಥವಾ ಕರ್ನಾಟಕ ಒನ್‌ ಕೇಂದ್ರದಿಂದ, ಸೈಬರ್‌ ಕೇಂದ್ರಗಳಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ನಿಗದಿತ ಕಾಲಾವಧಿಯಲ್ಲೇ ಇ–ಖಾತಾ ಪಡೆಯಬಹುದು’ ಎಂದರು.

ನಗರಸಭೆ ಪೌರಾಯುಕ್ತ ಎ.ಶಿವಕುಮಾರ್ ಪೂರಕ ಮಾಹಿತಿ ನೀಡಿ, ‘ಇನ್ನು ಮುಂದೆ ಗ್ರಾಹಕರು ಇ–ಖಾತಾಗಾಗಿ ನಗರಸಭೆ ಕಚೇರಿಗೆ ಬರುವಂತಿಲ್ಲ. ಈಗಾಗಲೇ 33 ಸಾವಿರ ಇ–ಖಾತಾ ನೀಡಲಾಗಿದೆ. ಉಳಿದ ಇ–ಖಾತಾಗಳಿಗೆ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು. ಇದೀಗ ಪರಿಶೀಲನೆ ಮಾಡುವ ಒಂದು ವಿಭಾಗ, ಅನುಮತಿ ನೀಡುವ ಒಂದು ವಿಭಾಗವಷ್ಟೇ ಇರುತ್ತದೆ. ಈ ಹಿಂದೆ ಐದಾರು ಕಡೆಗೆ ಕಡತ ಹೋಗಿ ಬರಬೇಕಿತ್ತು’ ಎಂದರು.

ADVERTISEMENT

‘ಈಗಾಗಲೇ ಸರ್ಕಾರವೇ ನಿರ್ದಿಷ್ಟ ದರ ನಿಗದಿಪಡಿಸಿದ್ದರೂ, ಜಿಲ್ಲಾಧಿಕಾರಿಗಳ ಮೂಲಕ ದರಪಟ್ಟಿಯನ್ನು ಅಂಟಿಸಲು ಕೋರಿಕೆ ಸಲ್ಲಿಸಲಾಗುವುದು. ಮೇಲಾಗಿ ಇನ್ನು ಮನೆಯಿಂದಲೇ ಅರ್ಜಿ ಹಾಕಿ, ಇ ಖಾತಾ ಪಡೆಯಬಹುದಾಗಿದೆ, ಅನುಕೂಲ ಇದ್ದವರು ಹಾಗೆ ಮಾಡಿದರೆ ಉತ್ತಮ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಹಂಪಿ: ನಮ್ಮನ್ನು ಕಾಯಬೇಡಿ‘

‘ಹಂಪಿಯಲ್ಲಿ ₹21 ಕೋಟಿ ವೆಚ್ಚದಲ್ಲಿ 21 ಕಡೆ ಪ್ರವಾಸಿಗರಿಗೆ ಮೂಲಸೌಲಭ್ಯ ಕಲ್ಪಿಸುವ ಯೋಜನೆಗೆ (ಟ್ರಾವೆಲರ್ ನೂಕ್‌) ಭೂಮಿಪೂಜೆಗಾಗಿ ನಮಗೆ ಕಾಯಬೇಡಿ ನೀವೇ ಮಾಡಿ ಎಂದು ಜಿಲ್ಲಾಧಿಕಾರಿ ಅವರಿಗೆ ತಿಳಿಸಲಾಗಿದೆ. ಉದ್ಘಾಟನೆ ವೇಳೆ ನಾವೆಲ್ಲ ಜತೆಗೂಡುತ್ತೇವೆ ಎಂದು ಹೇಳಿದ್ದೇನೆ. ಹೀಗಾಗಿ ಶಿಲಾನ್ಯಾಸ ಹಾಕಲಾಗಿದ್ದು ಮೂರು ತಿಂಗಳೊಳಗೆ ಕೆಲಸಗಳು ಮುಗಿಯಲಿವೆ’ ಎಂದು ಶಾಸಕ ಗವಿಯಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.