ADVERTISEMENT

ಸೈಕಲ್‌ನಲ್ಲಿ ಏಕಾಂಗಿ ಪಯಣ–ಮಹಿಳಾ ಸಬಲೀಕರಣದ ಪ್ರಚಾರ: ಎವರೆಸ್ಟ್‌ನತ್ತ ಸಮೀರಾ ಖಾನ್

​ಪ್ರಜಾವಾಣಿ ವಾರ್ತೆ
Published 14 ಮೇ 2025, 7:50 IST
Last Updated 14 ಮೇ 2025, 7:50 IST
   

ಹೊಸಪೇಟೆ (ವಿಜಯನಗರ): ಆಂಧ್ರಪ್ರದೇಶ ಅನಂತಪುರದ ಸೈಕ್ಲಿಸ್ಟ್‌ ಹಾಗೂ ಪರ್ವತಾರೋಹಿ ಸಮೀರಾ ಖಾನ್‌ ಅವರು ಸೈಕಲ್‌ನಲ್ಲಿ ಏಕಾಂಗಿಯಾಗಿ ನೇಪಾಳದ ಕಠ್ಮಂಡುವಿನತ್ತ ಹೊರಟಿದ್ದು, ಬಳಿಕ ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರುವ ಪ್ರಯತ್ನ ನಡೆಸಲಿದ್ದಾರೆ.

ಅನಂತಪುರದಿಂದ ಹೊರಟಿರುವ ಅವರು ಬುಧವಾರ ಹೊಸಪೇಟೆಗೆ ಬಂದರು. ಮುಂದೆ ಕೊಪ್ಪಳ, ಗದಗ, ಹುಬ್ಬಳ್ಳಿ, ಮುಂಬೈ, ಅಜ್ಮೇರ್, ದೆಹಲಿ, ಉತ್ತರ ಪ್ರದೇಶ ಮೂಲಕ ಕಠ್ಮಂಡು ತಲುಪಲಿದ್ದಾರೆ. 

2016ರಿಂದೀಚೆಗೆ ಸೈಕಲ್ ಸವಾರಿ, ಪರ್ವತಾರೋಹಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸಮೀರಾ ಖಾನ್‌ ಅವರು ಇದುವರೆಗೆ 11 ಪರ್ವತಗಳನ್ನು ಹತ್ತಿಳಿದಿದ್ದಾರೆ. ಇದೇ ಮೊದಲ ಬಾರಿಗೆ ಎವರೆಸ್ಟ್ ಹತ್ತಲು ಯೋಜನೆ ಹಾಕಿಕೊಂಡಿದ್ದು, ಅದಕ್ಕೆ ಅಗತ್ಯವಾದ ಹಣವನ್ನು (₹20 ಲಕ್ಷ) ಸೈಕಲ್‌ ಪಯಣದ ವೇಳೆ ಸಾರ್ವಜನಿಕರಿಂದ ಸಂಗ್ರಹಿಸುವ ಯೋಜನೆ ಹಾಕಿಕೊಂಡಿದ್ದಾರೆ. ಇದುವರೆಗೆ ₹10 ಲಕ್ಷ ಸಂಗ್ರಹಿಸಿದ್ದಾರೆ. ಪ್ರತಿದಿನ 100 ಕಿ.ಮೀ.ಕ್ರಮಿಸುವುದು ಹಾಗೂ ಒಟ್ಟಾರೆ 70 ದಿನದಲ್ಲಿ ಕಠ್ಮಂಡು ತಲುಪುವ ಯೋಜನೆ ಹಾಕಿಕೊಂಡಿದ್ದಾರೆ.

ADVERTISEMENT

ವಿದ್ಯಾರ್ಥಿನಿಯರಿಗೆ ಸ್ಫೂರ್ತಿ: ಹೊಸಪೇಟೆ ರೋಟರಿ ಕ್ಲಬ್‌ನವರು ಸಮೀರಾ ಖಾನ್ ಅವರನ್ನು ನಗರಕ್ಕೆ ಬರಮಾಡಿಕೊಂಡರು ಹಾಗೂ ಇಲ್ಲಿನ ವಿಜಯನಗರ ಕಾಲೇಜ್‌ನಲ್ಲಿ ವಿದ್ಯಾರ್ಥಿನಿಯರಿಗೆ ಸ್ಫೂರ್ತಿ ತುಂಬುವ ನಿಟ್ಟಿನಲ್ಲಿ ಸಣ್ಣ ಕಾರ್ಯಕ್ರಮ ಏರ್ಪಡಿಸಿದರು. 

‘ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಬೇಕು, ಓದು, ಉದ್ಯೋಗ, ಮದುವೆ, ಸಂಸಾರ ಅಷ್ಟೇ ಅಲ್ಲದೆ ಅದರಾಚೆಯೂ ಮಹಿಳೆ ಸಾಧಿಸಬಹುದಾದ ಕ್ಷೇತ್ರ ಬಹಳ ದೊಡ್ಡದಿದೆ, ಅದನ್ನು ಹುಡುಕುವ ಪ್ರಯತ್ನ ನಡೆಯಬೇಕು. ಸಮಾಜದಲ್ಲಿನ ವರದಕ್ಷಿಣೆ, ದೌರ್ಜನ್ಯ, ಲಿಂಗ ತಾರತಮ್ಯದಂತಹ ಪಿಡುಗನ್ನು ಮಹಿಳೆಯರೇ ಎದುರಿಸಿ ಗೆಲ್ಲಬೇಕು. ಜೀವನದಲ್ಲಿ ಮಹತ್ವಾಕಾಂಕ್ಷೆ ಇರಲೇಬೇಕು, ಅದರಿಂದ ಗುರಿ ಸಾಧನೆ ಸಾಧ್ಯವಾಗುತ್ತದೆ’ ಎಂದು ಅವರು ಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಪ್ರೊ.ಪ್ರಭುಗೌಡ, ರೋಟರಿ ಕ್ಲಬ್ ಅಧ್ಯಕ್ಷ ದೀಪಕ್ ಕೊಳಗದ್, ಕಾರ್ಯದರ್ಶಿ ವೀರಭದ್ರ, ಇನ್ನರ್‌ವೀಲ್‌ನ ಸುನೀತಾ, ಹಂಪಿ  ಪರ್ಲ್ಸ್‌ ಅಧ್ಯಕ್ಷೆ ನೀತಾ ಪಾಟೀಲ್‌ ಇತರರು ಇದ್ದರು.

ಸುತ್ತಿದ್ದು 37 ದೇಶ, ಏರಿದ್ದು 11 ಪರ್ವತ

ಸಮೀರಾ  ಖಾನ್‌ (29)ಅವರು ಮಹಿಳೆಯರು ಸಬಲೀಕರಣಗೊಳ್ಳಬೇಕು ಮತ್ತು ದೈಹಿಕವಾಗಿ ಫಿಟ್ ಆಗಿರಬೇಕು ಎಂದು ಬಲವಾಗಿ ಪ್ರತಿಪಾದಿಸುವವರು. ಅದನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಂಡವರು. ತಮ್ಮ ಎಂಟನೇ ವಯಸ್ಸಿನಲ್ಲಿ ಅಮ್ಮನನ್ನು ಕಳೆದುಕೊಂಡ ಅವರು, 19ನೇ ವಯಸ್ಸಿನಲ್ಲಿ ಅಪ್ಪನನ್ನೂ ಕಳೆದುಕೊಂಡವರು. ಬಳಿಕ ಅವರು  ಏಕಾಂಗಿಯಾಗಿಯೇ ಸೈಕಲ್ ಪಯಣ, ಪರ್ವತಾರೋಹಣ ಸಾಹಸದಲ್ಲಿ ಬ್ಯುಸಿಯಾಗಿದ್ದಾರೆ. ಇದುವರೆಗೆ 37 ದೇಶಗಳಿಗೆ ಸೈಕಲ್‌ನಲ್ಲಿ ತೆರಳಿರುವ ಅವರು, ಹಿಮಾಲಯ ಮತ್ತು ಯುರೋಪ್‌ನ 11 ಪರ್ವತಗಳನ್ನು ಹತ್ತಿದ್ದಾರೆ.

ಎವರೆಸ್ಟ್‌ನ ಅವರ ಈ ಪಯಣಕ್ಕೆ ಒಟ್ಟಾರೆ ₹41 ಲಕ್ಷ ವೆಚ್ಚ ತಗುಲಲಿದ್ದು, ಮಹಿಳೆಯರು, ಯುವತಿಯರಿಗೆ ಒಂದಿಷ್ಟು ಪ್ರೇರಣಾದಾಯಕ ಮಾತುಗಳನ್ನು ಆಡುತ್ತ, ತಮ್ಮ ಅಭಿಯಾನಕ್ಕೆ ಧನ ಸಂಗ್ರಹ ಮಾಡಿ ಮುಂದೆ ಸಾಗುತ್ತಿದ್ದಾರೆ. ಹೊಸಪೇಟೆ ರೋಟರಿ ಸಮೀರಾ ಅವರಿಗೆ ನಾಲ್ಕು ದಿನದ ವಸತಿ ವ್ಯವಸ್ಥೆ ಕಲ್ಪಿಸಿದ್ದಲ್ಲದೆ, ₹9 ಸಾವಿರ ಹಣ ನೀಡಿ ಪ್ರಯಾಣಕ್ಕೆ ಶುಭ ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.