
ಹೊಸಪೇಟೆ (ವಿಜಯನಗರ): ಹೂವಿನಹಡಗಲಿ ತಾಲ್ಲೂಕಿನಲ್ಲಿರುವ ಮೈಲಾರ ಶುಗರ್ಸ್ ಸಕ್ಕರೆ ಕಾರ್ಖಾನೆ ಕಳೆದ ನಾಲ್ಕು ತಿಂಗಳಿಂದ ಕಬ್ಬು ಖರೀದಿಸಿದ್ದಕ್ಕೆ ರೈತರಿಗೆ ಹಣ ನೀಡಿಲ್ಲ, ತಕ್ಷಣ ಅದನ್ನು ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ (ಕೋಡಿಹಳ್ಳಿ ಬಣ) ವತಿಯಿಂದ ಬುಧವಾರ ಇಲ್ಲಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ನಾಗರಾಜ್, ಹೊಸಪೇಟೆ ತಾಲ್ಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ ನೇತೃತ್ವದಲ್ಲಿ ಡಿ.ಸಿ ಬಳಿಗೆ ತೆರಳಿದ ನಿಯೋಗ, ಹೊಸಪೇಟೆ ಭಾಗದ ರೈತರು ಮೈಲಾರ ಶುಗರ್ಸ್ ಕಾರ್ಖಾನೆಗೆ ಕಬ್ಬು ಪೂರೈಸುವುದು ಅನಿವಾರ್ಯವಾಗಿದೆ, ಆದರೆ ನಾಲ್ಕು ತಿಂಗಳಿಂದ ಕಂಪನಿ ದುಡ್ಡು ಕೊಟ್ಟಿಲ್ಲ ಎಂದು ದೂರಿತು.
ಮುಂಡರಗಿ, ಸಿರುಗುಪ್ಪ, ಇನ್ನುಳಿದ ಸಕ್ಕರೆ ಕಾರ್ಖಾನೆಗಳು ಈಗಾಗಲೇ ಸಂಪೂರ್ಣ ಹಣವನ್ನು ರೈತರಿಗೆ ಪಾವತಿ ಮಾಡಿವೆ. ಮೈಲಾರ ಶುಗರ್ಸ್ ಕಾರ್ಖಾನೆಯವರು ಮಾತ್ರ 4 ತಿಂಗಳಿಂದ ಹಣ ನೀಡಿಲ್ಲ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೂ ಆಡಳಿತ ಮಂಡಳಿಯವರಿಗೂ ಪೋನ್ ಮೂಲಕ ವಿಚಾರಿಸಿದರೆ ಅವರು ನಾವು ರೈತರಿಗೆ ಪೇಮೆಂಟ್ ಮಾಡುತ್ತೇವೆ, ಸರ್ಕಾರದಿಂದ ಇಥೆನಾಲ್ ಪೇಮೆಂಟ್ ಆಗಿರುವುದಿಲ್ಲ ಎಂಬ ಉಡಾಫೆ ಉತ್ತರವನ್ನು ನೀಡುತ್ತಿದ್ದಾರೆ. ತಕ್ಷಣ ರೈತರ ಬವಣೆ ತಪ್ಪಿಸಿ ಇಲ್ಲವೇ ಕಾರ್ಖಾನೆಗೆ ನೀಡಿರುವ ಪರವಾನಗಿ ರದ್ದುಪಡಿಸಿ ಎಂದು ರೈತ ಮುಖಂಡರು ಒತ್ತಾಯಿಸಿದರು.
ಸೆಣಬು ಬೀಜಕ್ಕೆ ಸಬ್ಸಿಡಿ ಕೊಡಿಸಿ: ಕೃಷಿ ಇಲಾಖೆಯಲ್ಲಿ ಸಬ್ಸಿಡಿ ರೂಪದಲ್ಲಿ ಬರುವಂತಹ ಸೆಣಬಿನ ಬೀಜ ಒದಗಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ರೈತರಿಗೆ ಈ ಹಿಂದೆ ಸಿಟಿಕಾಂಪೋಸ್ಟ್, ಬೇವಿನಹಿಂಡಿ, ಹಲವಾರು ಔಷಧಿಗಳು, ಜಿಪ್ಸಂ, ಇನ್ನು ಹಲವಾರು ಗೊಬ್ಬರಗಳನ್ನು ಸಬ್ಸಿಡಿಯಲ್ಲಿ ನೀಡಲಾಗುತ್ತಿತ್ತು. ಹಾಲಿ ಸರ್ಕಾರ ಬಂದ ನಂತರ ಯಾವುದೇ ಗೊಬ್ಬರವಾಗಲಿ, ಔಷಧಿಗಳಾಗಲಿ, ಕೃಷಿಹೊಂಡಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿಯಲ್ಲಿ ಕೆಲಸಗಳು ಆಗುತ್ತಿಲ್ಲ. ಎಸ್.ಸಿ., ಎಸ್.ಟಿ ಅನುದಾನದಲ್ಲಿ ಸಬ್ಸಿಡಿ ರೂಪದಲ್ಲಿ ಬರುವಂತಹ 5-ಎಚ್.ಪಿ. ಮೋಟಾರ್, ಪವರ್‍ವೀಡರ್, ಚಾಪ್‍ಕಟರ್, ಬ್ಯಾಟರಿ ಸ್ಪ್ರೇಯರ್‌ಗಳೂ ಬಂದಿಲ್ಲ ಎಂದು ರೈತರು ದೂರಿದರು.
ತುಂಗಭದ್ರಾ–ಪರಿಹಾರ ನೀಡಲಿ: ತುಂಗಭದ್ರಾ ಕ್ರೆಸ್ಟ್‌ಗೇಟ್ ಶಿಥಿಲಗೊಂಡು ಒಂದು ಬೆಳೆ ಸಂಪೂರ್ಣ ನಷ್ಟವಾಗಿದೆ. ಸದ್ಯ ಕ್ರೆಸ್ಟ್‌ಗೇಟ್ ನಿರ್ಮಾಣವೂ ಮಂದಗತಿಯಲ್ಲಿದೆ. ಸರ್ಕಾರ ಪ್ರತಿಯೊಬ್ಬ ರೈತರಿಗೆ ಪ್ರತಿ ಒಂದು ಹೆಕ್ಟೇರ್‌ಗೆ ₹.50,000 ಬೆಳೆ ಪರಿಹಾರ ನೀಡಬೇಕು. ಮೇ31ರೊಳಗೆ ಎಲ್ಲ ಕ್ರೆಸ್ಟ್‌ಗೇಟ್‌ಗಳು ಅಳವಡಿಕೆ ಆಗದಿದ್ದಿಲ್ಲಿ ತುಂಗಭದ್ರಾ ಮಂಡಳಿಯ ಆಡಳಿತ ಕಚೇರಿಗೆ ಬೀಗ ಹಾಕುವ ಮುಖಾಂತರ ಉಗ್ರಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಮಣ್ಣು ಪರೀಕ್ಷೆ ಕೇಂದ್ರ ಸ್ಥಾಪಿಸಿ
ಹೊಸಪೇಟೆ ಸಮೀಪ ಮಣ್ಣು ಪರೀಕ್ಷೆ ಕೇಂದ್ರವನ್ನು ತೆರೆಯಬೇಕೆಂದು ಒಂದೂವರೆ ವರ್ಷದಿಂದಲೂ ಒತ್ತಾಯಿಸುತ್ತ ಬರಲಾಗಿದೆ. ಆದರೆ ಅದಕ್ಕೆ ಸಬೂಬು ಹೇಳಲಾಗುತ್ತಿದೆ. ಮಣ್ಣು ಪರೀಕ್ಷಾ ಕೇಂದ್ರವನ್ನು ಇನ್ನು ಒಂದು ವಾರದೊಳಗೆ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.