ಹೂವಿನಹಡಗಲಿ: ದಾಸನಹಳ್ಳಿ ಮತ್ತು ಹ್ಯಾರಡ ಕೆರೆ ತುಂಬಿಸುವ ಯೋಜನೆಗೆ ದಶಕದ ಹಿಂದೆ ಸ್ವಾಧೀನಪಡಿಸಿಕೊಂಡ ರೈತರ ಜಮೀನುಗಳಿಗೆ ಭೂ ಪರಿಹಾರ ನೀಡುವಂತೆ ಒತ್ತಾಯಿಸಿ ತಾಲ್ಲೂಕಿನ ಹೊಳಲು ಗ್ರಾಮದ ಮುಖಂಡ ಕೋಡಬಾಳ ಚಂದ್ರಪ್ಪ ನೇತೃತ್ವದಲ್ಲಿ ರೈತರು ಸೋಮವಾರ ಉಪವಾಸ ಸತ್ಯಾಗ್ರಹ ನಡೆಸಿದರು.
‘ಕೆರೆ ತುಂಬಿಸುವ ಯೋಜನೆಯ ಪೈಪ್ ಲೈನ್ ಅಳವಡಿಕೆಗಾಗಿ ಹೊಳಲು, ಬೂದನೂರು, ದಾಸನಹಳ್ಳಿ, ಪೋತಲಕಟ್ಟಿ, ಹ್ಯಾರಡ ಗ್ರಾಮಗಳ 30.23 ಎಕರೆ ಜಮೀನನ್ನು ಸರ್ಕಾರ ದಶಕದ ಹಿಂದೆಯೇ ಸ್ವಾಧೀನಪಡಿಸಿಕೊಂಡಿದೆ. ರೈತರಿಗೆ ಈವರೆಗೂ ಭೂ ಪರಿಹಾರ ನೀಡಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸದಿರುವುದರಿಂದ ಅನಿರ್ದಿಷ್ಟ ಧರಣಿ ಹಮ್ಮಿಕೊಂಡಿದ್ದೇವೆ’ ಎಂದು ಕೋಡಬಾಳ ಚಂದ್ರಪ್ಪ ಹೇಳಿದರು.
ಸಿಂಗಟಾಲೂರು ಏತ ನೀರಾವರಿ ಯೋಜನೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಘವೇಂದ್ರ ಸ್ಥಳಕ್ಕೆ ಭೇಟಿ ನೀಡಿ, ‘ನೇರ ಖರೀದಿಗೆ ಸಮ್ಮತಿಸಿದರೆ ತ್ವರಿತವಾಗಿ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸುತ್ತೇವೆ’ ಎಂದು ಭರವಸೆ ನೀಡಿ, ರೈತರ ಮನವೊಲಿಸಿದರು.
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಬೆನ್ನೂರು ಹಾಲೇಶ, ರೈತರಾದ ಗಡ್ಡಿಗೌಡ್ರ ಮಹೇಂದ್ರ, ನಾರಮ್ಮನವರ ವೀರಣ್ಣ, ಕುರುವತ್ತೆಪ್ಪ, ರೇವಣಪ್ಪ, ಪ್ರವೀಣ, ಜಗದೀಶ, ಎಂ.ಬಸಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.