ADVERTISEMENT

ಕರುಳ ಕೂಗಿಗೆ ಅಮೆರಿಕದಿಂದ ಸ್ಪಂದನ

ಮಹಿಳಾ ಸಬಲೀಕರಣಕ್ಕೊಂದು ಸದ್ದಿಲ್ಲದ ಸೇವೆ–10 ಮನೆ ದಾನ

ಎಂ.ಜಿ.ಬಾಲಕೃಷ್ಣ
Published 28 ಜೂನ್ 2025, 23:17 IST
Last Updated 28 ಜೂನ್ 2025, 23:17 IST
<div class="paragraphs"><p>ಹೊಸಪೇಟೆ ತಾಲ್ಲೂಕಿನ 82 ಡಣಾಪುರ ಗ್ರಾಮದಲ್ಲಿ ಪುನರ್ವಸತಿ ಕಲ್ಪಿತ ಮಹಿಳೆ ದೇವಮ್ಮ (ಎಡದಿಂದ ನಾಲ್ಕನೇಯವರು) ಅವರಿಗೆ ನಿರ್ಮಿಸಲಾಗಿರುವ ಮನೆ&nbsp; –ಪ್ರಜಾವಾಣಿ ಚಿತ್ರ</p></div>

ಹೊಸಪೇಟೆ ತಾಲ್ಲೂಕಿನ 82 ಡಣಾಪುರ ಗ್ರಾಮದಲ್ಲಿ ಪುನರ್ವಸತಿ ಕಲ್ಪಿತ ಮಹಿಳೆ ದೇವಮ್ಮ (ಎಡದಿಂದ ನಾಲ್ಕನೇಯವರು) ಅವರಿಗೆ ನಿರ್ಮಿಸಲಾಗಿರುವ ಮನೆ  –ಪ್ರಜಾವಾಣಿ ಚಿತ್ರ

   

ಹೊಸಪೇಟೆ (ವಿಜಯನಗರ): ಬಾಗಲಕೋಟೆ ಜಿಲ್ಲೆ ಜಮಖಂಡಿ ಮೂಲದ ಹಣಕಾಸು ಸಲಹೆಗಾರ ನಿತ್ಯಾನಂದ ಸದ್ಯ ಅಮೆರಿಕದಲ್ಲಿ ನೆಲೆಸಿದ್ದು, ತಮ್ಮ ತಾಯಿ ಶಕ್ಕು ಬದರಿನಾಥ ಅವರ ಹೆಸರಿನಲ್ಲಿ ಪುನರ್ವಸತಿ ಕಲ್ಪಿತ ಮಹಿಳೆ, ಒಂಟಿ ಮಹಿಳೆ, ಕೂಲಿ ಕಾರ್ಮಿಕ ಮಹಿಳೆ, ಆರೋಗ್ಯ ಹದಗೆಟ್ಟ ಮಹಿಳೆಯರಿಗೆ ಉಚಿತವಾಗಿ ಮನೆ ಕಟ್ಟಿಸಿಕೊಡುತ್ತಿದ್ದು, ಅಂತಹ 10 ಮನೆಗಳು ತಾಲ್ಲೂಕಿನಲ್ಲಿ ನಿರ್ಮಾಣವಾಗುತ್ತಿವೆ.

ನಾಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ 82 ಡಣಾಪುರದಲ್ಲಿ ಎಂಟು ಮನೆಗಳು ಹಾಗೂ ಪಾಪಿನಾಯಕನ ಹಳ್ಳಿಯಲ್ಲಿ ಎರಡು ಮನೆಗಳು ನಿರ್ಮಾಣವಾಗುತ್ತಿದ್ದು, ಜುಲೈ 4ರಂದು ಮನೆ ಮಾಲೀಕರಿಗೆ ಸಂವಿಧಾನ ಪೀಠಿಕೆ ನೀಡಿ ಕೀ ಹಸ್ತಾಂತರ ನಡೆಯಲಿದೆ.

ADVERTISEMENT

ನಿತ್ಯಾನಂದ ಅವರು ಕಳೆದ ವರ್ಷದಿಂದ  ಈ ಕಾರ್ಯ ಆರಂಭಿಸಿದ್ದಾರೆ. ತಲಾ ₹2.80 ಲಕ್ಷ ವೆಚ್ಚದಲ್ಲಿ ಪುನರ್ವಸತಿ ಕಲ್ಪಿತ ಮಹಿಳೆಯರಿಗೆ ಐದು ಮನೆಗಳನ್ನು ಇದೇ 82 ಡಣಾಪುರ ಗ್ರಾಮದಲ್ಲಿ ಕಟ್ಟಿಸಿಕೊಟ್ಟಿದ್ದಾರೆ. ಈ ಬಾರಿ ಸಖಿ ಟ್ರಸ್ಟ್‌ ಮೂಲಕ ಮತ್ತೆ 10 ಮನೆಗಳನ್ನು ತಲಾ ₹2.90 ಲಕ್ಷ ವೆಚ್ಚದಲ್ಲಿ ಕಟ್ಟಿಸಿಕೊಟ್ಟಿದ್ದಾರೆ. ಬೆಳಗಾವಿ, ಚಾಮರಾಜನಗರ, ಕೋಲಾರ ಜಿಲ್ಲೆಗಳಲ್ಲೂ ತೀರಾ ಅಗತ್ಯ ಇರುವ ಮಹಿಳೆಯರಿಗೆ ತಲಾ 5 ಮನೆಗಳನ್ನು ಕಟ್ಟಿಸಿಕೊಡುತ್ತಿದ್ದಾರೆ.

ರಾಜ್ಯದ ಹಲವೆಡೆ ‘ಶಕ್ಕು ಬದರಿನಾಥ್‌ ಫೌಂಡೇಶನ್’ ಹೆಸರಲ್ಲಿ ಮನೆಗಳು ನಿರ್ಮಾಣವಾಗಿವೆ. ತಾವು  ಪ್ರಚಾರದಿಂದ ದೂರ ಉಳಿದಿದ್ದಾರೆ. ತಮ್ಮ ಫೋಟೊ ಸಹ ಎಲ್ಲೂ ಕಾಣಬಾರದು ಎಂಬ ಕಟ್ಟಪ್ಪಣೆಯನ್ನು ಸಖಿ ಟ್ರಸ್ಟ್‌ಗೆ ಕೊಟ್ಟಿದ್ದಾರೆ.

ಮನೆಗಳು ಹೇಗಿವೆ?: ಮಾಜಿ ಸಚಿವ ಆನಂದ್ ಸಿಂಗ್ ಅವರು ಎಂಟು ವರ್ಷಗಳ ಹಿಂದೆ 82 ಡಣಾಪುರದಲ್ಲಿ ಸರ್ಕಾರಿ ಜಾಗದಲ್ಲಿ ಬಡವರ ವಸತಿ ಯೋಜನೆಗಾಗಿ ಲೇಔಟ್‌ ರೂಪಿಸಿದ್ದರು. ಸಿಮೆಂಟ್ ರಸ್ತೆ, ಚರಂಡಿಯ ವ್ಯವಸ್ಥೆ ಮಾಡಿಸಿದ್ದರು. ತುಂಗಭದ್ರಾ ನದಿ ದಂಡೆಯಲ್ಲಿ ತೀರಾ ಕಷ್ಟದ ಸ್ಥಿತಿಯಲ್ಲಿ ವಾಸವಿದ್ದವರು ಇಲ್ಲಿ ಗುಡಿಸಲು ಕಟ್ಟಿಕೊಂಡಿದ್ದರು. ಬಳಿಕ ನಾಗೇನಹಳ್ಳಿ ಗ್ರಾಮ ಪಂಚಾಯಿತಿಯಿಂದ ಸರ್ವೇ ಮಾಡಿಸಿ ಪಟ್ಟಾ ನೀಡುವ ಕೆಲಸವನ್ನು ಸಖಿ ಟ್ರಸ್ಟ್‌ ಮಾಡಿತ್ತು. 

30x40 ಚದರ ಅಡಿ ನಿವೇಶನದಲ್ಲಿ 13x17 ಚದರಿ ಅಡಿಯ ಮನೆ ನಿರ್ಮಿಸಲಾಗಿದೆ. ಮನೆಯ ಹೊರಗಡೆ 9x5 ಚದರ ಅಡಿಯ ಬಚ್ಚಲು/ಶೌಚಾಲಯ ನಿರ್ಮಿಸಲಾಗಿದೆ. ಚಾವಣಿಗೆ ಶೀಟ್‌ ಹಾಕಲಾಗಿದೆ. ಮನೆಯೊಳಗೆ ಹಾಲ್‌, ಕಿಚನ್, ಬೆಡ್‌ರೂಂ ಇದೆ. ಜಲಜೀವನ್ ಮಿಷನ್‌ನಡಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ.

ಸ್ವತಃ ದಾನಿಯಿಂದಲೇ ಆಯ್ಕೆ

ಮಹಿಳೆಯ ಹೆಸರಲ್ಲೇ ಪಟ್ಟಾ ಇರಬೇಕು ಆಕೆಯ ಬಳಿಕ ಆಕೆಯ ಪುತ್ರಿಯರಿಗಷ್ಟೇ ಮನೆ ಸಿಗಬೇಕು ಎಂಬ ಉದ್ದೇಶದಿಂದ ಹತ್ತಾರು ಫಲಾನುಭವಿಗಳ ಪಟ್ಟಿ ತರಿಸಿಕೊಂಡು ಸೂಕ್ತ ವ್ಯಕ್ತಿಯನ್ನು ಆರಿಸುವುದು ದಾನಿ ನಿತ್ಯಾನಂದ ಅವರು. ತಮ್ಮೂರಿಗೆ ಬಂದಾಗ ವರ್ಷಕ್ಕೆ ಒಮ್ಮೆ ಮಾತ್ರ ಇಲ್ಲಿಗೂ ಬರುತ್ತಾರೆ ಫಲಾನುಭವಿಗಳ ಆಯ್ಕೆ ಮಾಡುತ್ತಾರೆ. ವಿಜಯನಗರ ಜಿಲ್ಲೆಯಲ್ಲಿ ಪುನರ್ವಸತಿ ಕಲ್ಪಿತ ಮಹಿಳೆಯರು ಬಹಳಷ್ಟು ಕಷ್ಟಕರ ಜೀವನ ಸಾಗಿಸುತ್ತಿದ್ದಾರೆ ಎಂಬ ಮಾಹಿತಿ ಪಡೆದು ಅವರು ಕಳೆದ ವರ್ಷ ಕೇವಲ ಅಂತಹವರಿಗೇ ಐದು ಮನೆ ಕಟ್ಟಿಸಿಕೊಟ್ಟಿದ್ದರು. ಈ ಬಾರಿ ಪುನರ್ವಸತಿ ಕಲ್ಪಿತ ಮಹಿಳೆಯರ ಸಹಿತ ತೀರಾ ಕಷ್ಟಕರ ಸ್ಥಿತಿಯಲ್ಲಿರುವ ಇತರ ಮಹಿಳೆಯರನ್ನೂ ಆಯ್ಕೆ ಮಾಡಿದ್ದಾರೆ. ಮುಂದಿನ ವರ್ಷವೂ ಮತ್ತೆ 10 ಮನೆಗಳನ್ನು ಕಟ್ಟಿಸಿಕೊಡುವುದಾಗಿ ತಿಳಿಸಿದ್ದಾರೆ. 

ನಿಜವಾದ ಅರ್ಧದಲ್ಲಿ ಮಹಿಳಾ ಸಬಲೀಕರಣ ಪ್ರಚಾರವನ್ನೇ ಬಯಸದ ಒಬ್ಬ ದಾನಿಯಿಂದ ನಡೆಯುತ್ತಿದೆ. ದಾನದ ಹಣ ನಯಾ ಪೈಸೆ ವ್ಯರ್ಥವಾಗದ ರೀತಿಯಲ್ಲಿ ನಾವು ಅದನ್ನು ಜಾರಿಗೆ ತರುತ್ತಿದ್ದೇವೆ.
– ಭಾಗ್ಯಲಕ್ಷ್ಮಿ ಸಖಿ ಟ್ರಸ್ಟ್‌ ಸಂಸ್ಥಾಪಕಿ
ಹೊಸಪೇಟೆ ತಾಲ್ಲೂಕಿನ 82 ಡಣಾಪುರ ಗ್ರಾಮದಲ್ಲಿ ಕಷ್ಟದಲ್ಲಿರುವ ಮಹಿಳೆಯರಿಗಾಗಿ ನಿರ್ಮಾಣವಾದ ಮನೆ ಶೌಚಾಲಯ–ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.