ADVERTISEMENT

ಹಂಪಿಯ ಉಗ್ರನರಸಿಂಹ ಬಳಿಯ ಬಡವಿಲಿಂಗದ ನೀರಿನಲ್ಲಿ ಚಪ್ಪಲಿ ಎಸೆತ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 8:22 IST
Last Updated 23 ಅಕ್ಟೋಬರ್ 2025, 8:22 IST
   

ಹೊಸಪೇಟೆ (ವಿಜಯನಗರ): ಹಂಪಿಯ ಉಗ್ರನರಸಿಂಹ ಬಳಿಯ ಶ್ರೀ ಬಡವಿಲಿಂಗ ದೇವಸ್ಥಾನದ ನೀರಿಗೆ ಚಪ್ಪಲಿ ಎಸೆಯಲಾಗಿದ್ದು, ಪ್ರವಾಸಿಗರು, ಭಕ್ತರು ಆಘಾತ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್ 19ರಂದು ಈ ಘಟನೆ ನಡೆದಿದೆ, ಪ್ರವಾಸಿಗರು ಅಥವಾ ಇತರ ಯಾರೋ ಚಪ್ಪಲಿಯನ್ನು ಗರ್ಭಗುಡಿಯ ನೀರಿನಲ್ಲಿ ಎಸೆದಿದ್ದಾರೆ. ಇಲ್ಲಿ ಮೂರನೇ ಸಲ ಇಂತಹ ಪ್ರಸಂಗ ಸಂಭವಿಸಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಈ ಕುರಿತು, ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್ಐ) ನಾವು ದೂರು ನೀಡಿದ್ದೇವೆ ಎಂದು ಹಂಪಿಯ ನಾಗರಿಕರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

ಬಡವಿಲಿಂಗದಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಇದು ಸ್ಮಾರಕದ ಜತೆಗೆ ಪೂಜ್ಯ ಸ್ಥಳವೂ ಹೌದು, ಹೀಗಾಗಿ ಉಗ್ರ ನರಸಿಂಹ, ಬಡವಿಲಿಂಗ ನೋಡಲು ಬರುವವರು ಚಪ್ಪಲಿ ದೂರ ಇಟ್ಟು ಬರಬೇಕು ಎಂದು ವಿನಂತಿಸುತ್ತೇವೆ, ಆಟೊ ಚಾಲಕರು, ಪ್ರವಾಸಿ ಮಾರ್ಗದರ್ಶಿಗಳು ಈ ನಿಟ್ಟಿನಲ್ಲಿ ಜನರಿಗೆ ಮನವರಿಕೆ ಮಾಡಬೇಕು ಎಂಬ ಸಂದೇಶ ಹಂಪಿ ಮತ್ತು ಪ್ರಕಾಶ್ ನಗರದ ಸ್ಥಳೀಯರ ಮೊಬೈಲ್ ಗಳಿಗೆ ರವಾನಿಸಲಾಗಿದೆ.

ಬಡವಿಲಿಂಗ ಸಹ ವಿಜಯನಗರ ಕಾಲದಲ್ಲಿ ನಿರ್ಮಾಣವಾದ ಬೃಹತ್ ಶಿವಲಿಂಗವಾಗಿದ್ದು, ಅದರ ಸುತ್ತ ವರ್ಷವಿಡೀ ನೀರು ತುಂಬಿಯೇ ಇರುತ್ತದೆ. ಹಂಪಿಯ ಪ್ರಮುಖ ಆಕರ್ಷಣೆಗಳಲ್ಲಿ ಬಡವಿಲಿಂಗ ಸಹ ಒಂದು. ಹೀಗಾಗಿ ಹಂಪಿಗೆ ಬಂದವರು ಉಗ್ರ ನರಸಿಂಹ, ಅದರ ಪಕ್ಕದ ಬಡವಿಲಿಂಗ ನೋಡಿದರಷ್ಟೇ ತಮ್ಮ ಪ್ರವಾಸ ಪರಿಪೂರ್ಣ ಎಂದು ಭಾವಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.