ADVERTISEMENT

ತುಂಗಭದ್ರಾ ನದಿಯಲ್ಲಿ ಪ್ರವಾಹದ ಎಚ್ಚರಿಕೆ: ಯಾವುದೇ ಕ್ಷಣ 2 ಲಕ್ಷ ಕ್ಯುಸೆಕ್‌ ನೀರು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 13:25 IST
Last Updated 9 ಆಗಸ್ಟ್ 2022, 13:25 IST
ವಿಜಯನಗರ ಜಿಲ್ಲೆ ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದ ಎಲ್ಲ 33 ಕ್ರಸ್ಟ್‌ಗೇಟ್‌ ತೆಗೆದು ನದಿಗೆ 1.58 ಲಕ್ಷ ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ
ವಿಜಯನಗರ ಜಿಲ್ಲೆ ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದ ಎಲ್ಲ 33 ಕ್ರಸ್ಟ್‌ಗೇಟ್‌ ತೆಗೆದು ನದಿಗೆ 1.58 ಲಕ್ಷ ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ   

ಹೊಸಪೇಟೆ (ವಿಜಯನಗರ): ಇಲ್ಲಿನ ತುಂಗಭದ್ರಾ ಜಲಾಶಯಕ್ಕೆ ಒಂದೂವರೆ ಲಕ್ಷ ಕ್ಯುಸೆಕ್‌ ಸಮೀಪ ಒಳಹರಿವು ಇರುವುದರಿಂದ ನದಿಗೆ ಯಾವುದೇ ಸಂದರ್ಭದಲ್ಲಿ 2 ಲಕ್ಷ ಕ್ಯುಸೆಕ್‌ ವರೆಗೆ ನೀರು ಹರಿಸಲಾಗುವುದು ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಮಂಗಳವಾರ ತಿಳಿಸಿದೆ.

‘ನದಿ ತೀರದ ಜನ ಹಾಗೂ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಯಾವುದೇ ಕಾರಣಕ್ಕೂ ನದಿಗೆ ಇಳಿಯಬಾರದು. ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು, ಕರ್ನೂಲ್‌, ಮೆಹಬೂಬ್‌ನಗರ, ಅನಂತಪುರ ಜಿಲ್ಲಾಡಳಿತಗಳು ಅಗತ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದು ಎಚ್ಚರಿಕೆಯ ಸಂದೇಶ ನೀಡಿದೆ. ಸದ್ಯ ನದಿಗೆ 1.58 ಲಕ್ಷ ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ.

ಮೂರು ಸೇತುವೆ ಮುಳುಗಡೆ

ಹೊಸಪೇಟೆ (ವಿಜಯನಗರ): ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಭಾರಿ ಹೆಚ್ಚಳವಾಗಿರುವುದರಿಂದ ಅವಳಿ ಜಿಲ್ಲೆಗಳಾದ ವಿಜಯನಗರ–ಬಳ್ಳಾರಿಯಲ್ಲಿ ಮೂರು ಸೇತುವೆಗಳು ಮಂಗಳವಾರ ಮುಳುಗಿದ್ದು ಸಂಪರ್ಕ ಕಡಿತಗೊಂಡಿದೆ.
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಹಲುವಾಗಲು-ಗರ್ಭಗುಡಿ ಸಂಪರ್ಕಿಸುವ ಸೇತುವೆ, ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲ್ಲೂಕಿನ ಕಂಪ್ಲಿ–ಗಂಗಾವತಿ, ಕಂಪ್ಲಿ–ಸಿರುಗುಪ್ಪ ಸೇತುವೆ ಮುಳುಗಿರುವುದರಿಂದ ಸಂಪರ್ಕ ಕಡಿದು ಹೋಗಿದೆ. ಹರಪನಹಳ್ಳಿ, ಕಂಪ್ಲಿಯಲ್ಲಿ ಭತ್ತ, ಮೆಕ್ಕೆಜೋಳ, ಕಬ್ಬು, ಬಾಳೆ ಗದ್ದೆಗಳಿಗೆ ನೀರು ನುಗ್ಗಿದೆ. ಸಂಡೂರು ತಾಲ್ಲೂಕಿನ ಚೋರನೂರು ಗ್ರಾಮದಲ್ಲಿ ಮನೆ ಗೋಡೆ ಕುಸಿದು ಬಿದ್ದಿದೆ.

ADVERTISEMENT

1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ 1,632 ಅಡಿ ನೀರಿನ ಸಂಗ್ರಹವಿದೆ. ಪ್ರತಿ ಗಂಟೆಗೆ 1.36 ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. 1.58 ಲಕ್ಷ ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ. ಈಗಾಗಲೇ ಹಂಪಿ ಸ್ಮಾರಕಗಳು ಮುಳುಗಡೆಯಾಗಿದ್ದು, ಸ್ನಾನಘಟ್ಟ, ನದಿ ತೀರದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.