ADVERTISEMENT

ವಿಜಯನಗರ: ಆಸ್ಪತ್ರೆಗೆ ಉಚಿತ ಉಪಾಹಾರಕ್ಕೆ ನೂರರ ಸಂಭ್ರಮ

ಒಳರೋಗಿಗಳ ಹೊಟ್ಟೆ ತುಂಬಿಸುವುದರಲ್ಲೇ ಸಂತೃಪ್ತಿ ಕಂಡ ಗಂಗಾಧರ

ಸಿ.ಶಿವಾನಂದ
Published 13 ಜುಲೈ 2025, 4:35 IST
Last Updated 13 ಜುಲೈ 2025, 4:35 IST
ಹಗರಿಬೊಮ್ಮನಹಳ್ಳಿಯಲ್ಲಿ ಹೋಟೆಲ್ ಮಾಲೀಕ ಎಸ್.ಎಂ.ಗಂಗಾಧರ ಮತ್ತು ಅವರ ಗೆಳೆಯರು 100ನೇ ದಿನದಂದು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಉಚಿತ ಉಪಾಹಾರ ವಿತರಿಸಿದರು
ಹಗರಿಬೊಮ್ಮನಹಳ್ಳಿಯಲ್ಲಿ ಹೋಟೆಲ್ ಮಾಲೀಕ ಎಸ್.ಎಂ.ಗಂಗಾಧರ ಮತ್ತು ಅವರ ಗೆಳೆಯರು 100ನೇ ದಿನದಂದು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಉಚಿತ ಉಪಾಹಾರ ವಿತರಿಸಿದರು   

ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಇಲ್ಲಿನ 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗುವ ಒಳರೋಗಿಗಳಿಗೆ ನಿತ್ಯ ಸಂಜೆ ಉಚಿತ ಉಪಾಹಾರ ನೀಡುವ ಮೂಲಕ ವಿಶೇಷ ಸೇವೆ ಮಾಡುತ್ತಿರುವ ಪಟ್ಟಣದ ದರ್ಶನ್ ಹೋಟೆಲ್ ಮಾಲೀಕ ಎಸ್.ಎಂ.ಗಂಗಾಧರ ಮತ್ತು ಕುಟುಂಬವು, ರೋಗಿಗಳ ಹೊಟ್ಟೆ ತುಂಬಿಸುವುದರಲ್ಲೇ ಸಂತೃಪ್ತಿ ಕಾಣುತ್ತಿದೆ.

ಪ್ರತಿದಿನ ಅಂದಾಜು 75ರಿಂದ 80 ರೋಗಿಗಳಿಗೆ, ಬಾಣಂತಿಯರಿಗೆ ಉಚಿತವಾಗಿಯೇ ಇಡ್ಲಿ, ಉಪ್ಪಿಟ್ಟು, ಗಂಜಿ ನೀಡಲಾಗುತ್ತಿದೆ. ಈ ಕಾರ್ಯಕ್ಕಾಗಿ ಪ್ರತಿ ತಿಂಗಳು ₹60 ಸಾವಿರದಿಂದ ₹75 ಸಾವಿರ ಖರ್ಚು ಮಾಡುತ್ತಿದ್ದಾರೆ. ಈ ವಿಶಿಷ್ಟ ಸೇವೆ ಇದೀಗ 100 ದಿನಗಳ ಗಡಿ ದಾಟಿದೆ.

ಹೋಟೆಲ್ ಸಿಬ್ಬಂದಿ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದ ರೋಗಿಗಳಿಗೆ ಟೋಕನ್ ನೀಡಿ ಬರುತ್ತಾರೆ. ಸಂಜೆ ಬರುವ ರೋಗಿಗಳ ಸಂಬಂಧಿಕರಿಗೆ ಬಿಸಿ ಬಿಸಿಯಾದ ಉಪಾಹಾರ, ನೀರು ನೀಡಲಾಗುತ್ತಿದೆ.

ADVERTISEMENT

ಗಂಗಾಧರ ಅವರೊಂದಿಗೆ ಅವರ ಪತ್ನಿ ಅಂಬುಜಾ ಹಾಗೂ ಸ್ನೇಹಿತರಾದ ಸಿ.ಎಂ.ಶ್ರೀನಿವಾಸ, ಸರ್ದಾರ ಯಮನೂರಪ್ಪ, ಮಡಿವಾಳರ ಅಶೋಕ, ಲಕ್ಷ್ಮಿಪತಿ (ಪುಟ್ಟು) ಆಟೋ ವೀರೇಶ, ಪರಶುರಾಮ ಕೈ ಜೋಡಿಸಿದ್ದಾರೆ.

‘ಹೋಟೆಲ್‍ನಲ್ಲಿ ಸಂಜೆ ಸಮಯದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಸಹಾಯವನ್ನು ಗಂಗಾಧರ ನೆನೆಯುತ್ತಾರೆ. ಇಲ್ಲಿ ಉಪಾಹಾರ ಪಡೆದು ಆಸ್ಪತ್ರೆಯಲ್ಲಿ ಗುಣಮುಖರಾಗಿ ತೆರಳುವ ರೋಗಿಯ ಕಡೆಯ ಪ್ರತಿಯೊಬ್ಬರೂ ಇವರ ಸೇವೆಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಈ ಕಾರ್ಯ ಸ್ತುತ್ಯರ್ಯ, ಇಂತಹ ಸಮಾಜಮುಖಿ ಕೆಲಸಗಳಿಗೆ ಯುವಕರು ಮುಂದೆ ಬರಬೇಕು ಎನ್ನುತ್ತಾರೆ’ ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರವೀಣ್‍ಕುಮಾರ್.

ರೋಗಿಗಳ ಕುಟುಂಬದವರು ಉಪಾಹಾರಕ್ಕಾಗಿ ಪಟ್ಟಣದಲ್ಲಿ ಅಲೆದಾಡುವುದು ಗಮನಕ್ಕೆ ಬಂತು. ಹೀಗಾಗಿ ಬರುವ ಲಾಭದಲ್ಲಿ ಒಂದಿಷ್ಟು ರೋಗಿಗಳಾಗಿ ಮೀಸಲಿಡಲು ನಿರ್ಧರಿಸಿದೆ.
– ಎಸ್.ಎಂ.ಗಂಗಾಧರ, ಹೋಟೆಲ್ ಮಾಲೀಕ
ಈ ಸೇವೆಗೆ ಎಲ್ಲ ಕಡೆಯಿಂದಲೂ ಶ್ಲಾಘನೆ ವ್ಯಕ್ತವಾಗಿದೆ. ತಾವೂ ಇದರಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಬಹುತೇಕರು ಕೇಳುತ್ತಿದ್ದಾರೆ. ವೆಚ್ಚ ಭರಿಸುವುದಾಗಿ ಹೇಳುತ್ತಿದ್ದಾರೆ.
– ಸಿ.ಎಂ.ಶ್ರೀನಿವಾಸ, ಸೇವೆಯಲ್ಲಿ ಕೈ ಜೋಡಿಸಿದವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.