ಹೊಸಪೇಟೆ (ವಿಜಯನಗರ): ಗಣೇಶ ಪ್ರತಿಷ್ಠಾಪನೆಯಾಗಿ ಐದನೇ ದಿನವಾದ ಭಾನುವಾರ ಸಂಜೆ ಜಿಲ್ಲೆಯಲ್ಲಿ 1,270ಕ್ಕೂ ಅಧಿಕ ಸಾರ್ವಜನಿಕ ಮೂರ್ತಿಗಳ ವಿಸರ್ಜನೆ ವಿಜೃಂಭಣೆಯಿಂದ ನೆರವೇರಿತು.
ಕಿವಿಗಡಚಿಕ್ಕುವ, ಕಣ್ಣು ಕೋರೈಸುವ ಡಿ.ಜೆ ಸದ್ದು, ಬೆಳಕು ಹೊಸಪೇಟೆ ನಗರದಲ್ಲೆಲ್ಲ ಹರಡಿತ್ತು. ಯುವಜನತೆ ಡಿ.ಜೆ ಸದ್ದಿಗೆ ಕುಣಿದು ಕುಪ್ಪಳಿಸುತ್ತ ವಿಘ್ನ ವಿನಾಯಕನನ್ನು ಭವ್ಯ ಮೆರವಣಿಗೆಯಲ್ಲಿ ಮುಂದಕ್ಕೆ ಸಾಗಿಸಿ, ಕೊನೆಗೆ ವಿಸರ್ಜನೆ ನೆರವೇರಿಸಿದರು. ಯುವಕರಂತೆ ಯುವತಿಯರು ಸಹ ಡಿ.ಜೆ ಸದ್ದಿಗೆ ಭರ್ಜರಿಯಾಗಿಯೇ ಹೆಜ್ಜೆ ಹಾಕಿದರು. ಮಹಿಳೆಯರು ಸಹ ಸ್ವಲ್ಪ ಹೊತ್ತು ಕುಣಿದರು ಹಾಗೂ ತಮ್ಮ ಮಕ್ಕಳ ಕುಣಿತವನ್ನು ಮೊಬೈಲ್‌ಗಳಲ್ಲಿ ಸೆರೆ ಹಿಡಿದರು. ಪಟೇಲ್ ನಗರ, ಹಂಪಿ ರಸ್ತೆ ಸಹಿತ ಇಂತಹ ಸುಂದರ ದೃಶ್ಯ ಕಾಣಿಸಿತು.
ನಗರದಲ್ಲಿ 159ರಷ್ಟು ಸಾರ್ವಜನಿಕ ಗಣೇಶ ವಿಗ್ರಹಗಳ ಮೆರವಣಿಗೆ ನಡೆಯಿತು. ಶೇ 90ರಷ್ಟು ವಿನಾಯಕ ಮೂರ್ತಿಗಳನ್ನು ಸ್ಟೇಷನ್ ರಸ್ತೆಯ ಎಲ್‌ಎಲ್‌ಸಿ ಕಾಲುವೆಯಲ್ಲಿ ವಿಸರ್ಜಿಸಲಾಯಿತು.
ಭಾನುವಾರ ಮಧ್ಯಾಹ್ನ ಸ್ವಲ್ಪ ಹೊತ್ತು ಕೆಲವೆಡೆ ಮಳೆಯಾಗಿತ್ತು, ಸಂಜೆ ಸಹ ಜಿಟಿ ಜಿಟಿ ಮಳೆ ಸುರಿದಿತ್ತು. ಆದರೆ ಮುಸ್ಜಂಜೆಯಾಗುತ್ತಿದ್ದಂತೆಯೇ ದಟ್ಟ ಮೋಡ ಇದ್ದರೂ ಮಳೆ ಬಿಡುವು ನೀಡಿತು. ಹೀಗಾಗಿ ಶೋಭಾಯಾತ್ರೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಮೂರನೇ ದಿನದಂತೆ ಐದನೇ ದಿನವೂ ಭಾರಿ ಸಂಖ್ಯೆಯಲ್ಲಿ ಜನ ಸೇರುವುದು, ಭರ್ಜರಿ ಶೋಭಾಯಾತ್ರೆಗಳು ನಡೆಯುವ ಕಾರಣ ನಗರದೆಲ್ಲೆಡೆ ಮಾತ್ರವಲ್ಲದೆ, ಜಿಲ್ಲೆಯ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ರಾತ್ರಿ 10 ಗಂಟೆಗೆ ಕಟ್ಟುನಿಟ್ಟಾಗಿ ಡಿ.ಜೆ ಬಂದ್ ಮಾಡಿಸುತ್ತಿದ್ದುದು ಕಂಡುಬಂತು.
ವಿವಿಧ ಸ್ಪರ್ಧೆ: ಹಲವಾರು ಗಣೇಶೋತ್ಸವ ಪೆಂಡಾಲ್ ಸಮೀಪ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡು ಸ್ಥಳೀಯರು, ಮಹಿಳೆಯರು, ಮಕ್ಕಳನ್ನು ಅದರಲ್ಲಿ ಚೆನ್ನಾಗಿ ತೊಡಗಿಸಿಕೊಳ್ಳಲಾಯಿತು. ವಡಕರಾಯ ದೇವಸ್ಥಾನದಲ್ಲಿ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. 400ಕ್ಕೂ ಅಧಿಕ ಮಂದಿ ಅದರಲ್ಲಿ ಪಾಲ್ಗೊಂಡರು. ಮಡ್ಡಿಗಟ್ಟಿ ದೇವಸ್ಥಾನದಲ್ಲಿ ರಂಗೋಲಿ, ಕೋಲಾಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಕನ್ನಡ ಯುವಕ ಸಂಘದವರು ಮಹಿಳೆಯರು, ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ಉಕ್ಕಡಕೇರಿ ಗರಡಿ ಮನೆ ಸಮೀಪ ರಂಗೋಲಿ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು.
ವಿಕಾಸ ಯುವಕ ಮಂಡಳ ಸಾರ್ವಜನಿಕ ಗಣೇಶ ಉತ್ಸವ ಸಮಿತಿಗಳಿಗೆ ನೀಡುವ ತಿಲಕ ಪ್ರಶಸ್ತಿ ಘೋಷಣೆಯಾಗಿದ್ದು ಛಲವಾದಿ ಯುವಕರ ಬಳಗ ರಚಿಸಿದ್ದ ಹೆಣ್ಣು ಮಕ್ಕಳ ಅತ್ಯಾಚಾರ ನಿಲ್ಲಲಿ - ನ್ಯಾಯಸಿಗಲಿ ಎಂಬ ಸಂದೇಶ ಸಾರುವ ಉತ್ಸವ ಸಮಿತಿ ಮೊದಲ ಬಹುಮಾನ ಗಳಿಸಿತು.
ಬಾಣಗದಕೇರಿ ಕದಂಬ ಯುವಕರ ಸಂಘ ಸ್ಥಾಪಿಸಿದ ತಂದೆ-ತಾಯಿಗೆ ಮಕ್ಕಳೇ ಆಸರೆ ವೃದ್ಧಶ್ರಮವಲ್ಲ ಸಂದೇಶ ಸಾರುವ ಗಣೇಶನಿಗೆ ದ್ವಿತೀಯ ಬಹುಮಾನ ಹಾಗೂ ಅನಂತಶಯನಗುಡಿ ಪಾಂಡುರಂಗ ಕಾಲೋನಿಯ ಶ್ರೀ ಗಜಾನನ ಸೇವಾಲಾಲ್ ಯುವಕರ ಸಂಘವರ ಆರೋಗ್ಯ ಗಣಪತಿಗೆ ತೃತೀಯ ಬಹುಮಾನ ಲಭಿಸಿತು. ಜನಾಕರ್ಷಣೆ ಸಾರ್ವಜನಿಕ ಗಣೇಶೋತ್ಸವ ಮಂಡಳಿ ಪ್ರಶಸ್ತಿಗೆ ಎಂ.ಜೆ.ನಗರದ ವಾಯುಪುತ್ರ ಯುವಕರ ಸಂಘ ಪಾತ್ರವಾಯಿತು.
ವಿಜ್ಞಾನ ಕಾಲೇಜ್ ಯುವಕ ಸಂಘದವರು ವಿಶೇಷ ಕಲ್ಲಿನಿಂದ ಅಲಂಕೃತ ಗಣೇಶನಿಗೆ ವಿಶೇಷ ಪ್ರೋತ್ಸಾಹಕರ ಬಹುಮಾನ ಲಭಿಸಿತು. ಜಿಲ್ಲಾ ಸಂಪನ್ಮೂಲ ವ್ಯಕ್ತಿ ಗುರುಬಸವರಾಜ್ ಶೇಖರ್ ಡಿ. ವಿಕಾಸ ಯುವಕ ಮಂಡಳ ಅಧ್ಯಕ್ಷ ಗೋಸಲ ಬಸವರಾಜ ತೀರ್ಪುಗಾರರಾಗಿದ್ದರು. ವಿಕಾಸ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಹಿರೇಮಠ ಹಾಗೂ ತೀರ್ಪುಗಾರರು ವಡಕರಾಯಸ್ವಾಮಿ ದೇವಸ್ಥಾನ ತೇರಿನ ಮುಂದೆ ವಿಕಾಸ ಯುವಕ ಮಂಡಳ ಪ್ರತಿಷ್ಠಾಪಿಸಿದ್ದ ಗಜಾನನ ಸಮಿತಿಯ ಮುಂದೆ ಶನಿವಾರ ಸಂಜೆ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.