ಪಡಿತರ ಅಕ್ಕಿ ಸಾಗಣೆ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುವಾಗ ಸಿಕ್ಕಿಬಿದ್ದ ಗ್ಯಾಂಗ್!
ಹೊಸಪೇಟೆ (ವಿಜಯನಗರ): ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವ ದೊಡ್ಡ ಜಾಲವೊಂದನ್ನು ಭೇದಿಸಿರುವ ಗ್ರಾಮೀಣ ಠಾಣೆ ಪೊಲೀಸರು, ₹11.25 ಲಕ್ಷ ಮೌಲ್ಯದ 331 ಕ್ವಿಂಟಲ್ ಅಕ್ಕಿ ಮತ್ತು ಅದನ್ನು ಸಾಗಿಸಲು ಬಳಸಿದ್ದ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಬಳ್ಳಾರಿ–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಜಂಬುನಾಥ ರಸ್ತೆಯ ಕಿರು ಸೇತುವೆ ಬಳಿ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದಾಗ ಪಡಿತರ ಅಕ್ಕಿಯ ಅಕ್ರಮ ಸಾಗಣೆ ಬಯಲುಗೊಂಡಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್.ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಲಾರಿ ಚಾಲಕ ಸಹಿತ ಮೂವರನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಳ್ಳಲಾದ ಲಾರಿಯ ಮೌಲ್ಯ 25 ಲಕ್ಷ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದು ಬಳ್ಳಾರಿ ಜಿಲ್ಲೆಗೆ ಇಲಾಖೆಯಿಂದ ಪೂರೈಕೆಯಾದ ಅಕ್ಕಿಯಾಗಿದ್ದು, ಇದನ್ನು ಅಕ್ರಮವಾಗಿ ರಾಯಚೂರಿನತ್ತ ಸಾಗಿಸುವ ವೇಳೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ವಿಜಯನಗರ ಜಿಲ್ಲೆಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.