ಹೊಸಪೇಟೆ (ವಿಜಯನಗರ): ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಷ್ಟ್ರವ್ಯಾಪಿಯಾಗಿ ನಡೆಯುತ್ತಿರುವ ‘ಘರ್ ಘರ್ ತಿರಂಗಾ – ಹರ್ ಘರ್ ತಿರಂಗಾ’ ಅಭಿಯಾನಕ್ಕೆ ತಾಲ್ಲೂಕಿನಲ್ಲಿ ಬುಧವಾರ ಭಾವೈಕ್ಯತೆ ಮತ್ತು ದೇಶಭಕ್ತಿ ಮೆರೆಯುವ ರೀತಿಯಲ್ಲಿ ಚಾಲನೆ ನೀಡಲಾಯಿತು.
ನಗರಸಭೆಯ ಸದಸ್ಯರು ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಬೈಕ್ ರ‍್ಯಾಲಿ ನಡೆಸಿ, ಮನೆ ಮನೆಗೂ ರಾಷ್ಟ್ರಧ್ವಜ ಹಾರಿಸುವ ಜಾಗೃತಿಯನ್ನು ಸಾರ್ವಜನಿಕರಲ್ಲಿ ಮೂಡಿಸಲಾಯಿತು.
ಕಾರ್ಯಕ್ರಮ ನಗರಸಭೆ ಆವರಣದಿಂದ ಪ್ರಾರಂಭವಾಗಿ, ಮಾರ್ಕೆಟ್, ಮದಕರಿ ನಾಯಕ ವೃತ್ತ, ಗಾಳೆಮ್ಮಾ ಗುಡಿ, ವಾಲ್ಮೀಕಿ ವೃತ್ತ, ಮಾರ್ಕಂಡೇಶ್ವರ ಗುಡಿ, ಸರ್ಕಾರಿ 100 ಹಾಸಿಗೆ ಆಸ್ಪತ್ರೆ, ವಿಜಯನಗರ ಕಾಲೇಜು, ಅಂಬೇಡ್ಕರ್ ವೃತ್ತ, ಪುನೀತ್ ರಾಜಕುಮಾರ್ ವೃತ್ತ ಹಾಗೂ ಬಸ್‌ಸ್ಟ್ಯಾಂಡ್ ಮಾರ್ಗವಾಗಿ ಸಾಗಿತು. ಅಂತಿಮವಾಗಿ ನಗರಸಭೆ ಆವರಣದಲ್ಲಿ ಕಾರ್ಯಕ್ರಮ ಮುಕ್ತಾಯಗೊಂಡಿತು.
ರ‍್ಯಾಲಿಯಲ್ಲಿ ಪಾಲ್ಗೊಂಡವರು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ‘ವಂದೇ ಮಾತರಂ’, ‘ಭಾರತ ಮಾತಾ ಕೀ ಜಯ್’, ಘೋಷಣೆಗಳನ್ನು ಕೂಗುತ್ತಾ ದೇಶಭಕ್ತಿ ಉತ್ಸಾಹವನ್ನು ಹರಿಸಿದರು. ಕಾರ್ಯಕ್ರಮದಲ್ಲಿ ಹಲವು ಜನಪ್ರತಿನಿಧಿಗಳು, ನಗರಸಭೆ ಸಿಬ್ಬಂದಿ ಹಾಗೂ ಸ್ಥಳೀಯ ನಾಗರಿಕರು ಉತ್ಸಾಹದಿಂದ ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.