ADVERTISEMENT

ಹಂಪಿ ಉತ್ಸವ | ಮದುವಣಗಿತ್ತಿಯಂತೆ ಸಿಂಗಾರಗೊಂಡ ಟಗರು

ಕರಿಬಸವರಾಜ.ಜಿ
Published 4 ಫೆಬ್ರುವರಿ 2024, 5:56 IST
Last Updated 4 ಫೆಬ್ರುವರಿ 2024, 5:56 IST
ಹಂಪಿ ಉತ್ಸವದಲ್ಲಿ ನಡೆದ ಟಗರು ಸ್ಪರ್ಧೆಯಲ್ಲಿ ಖುಷಿ ಹಂಚಿಕೊಂಡ ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್‌  –ಪ್ರಜಾವಾಣಿ ಚಿತ್ರ
ಹಂಪಿ ಉತ್ಸವದಲ್ಲಿ ನಡೆದ ಟಗರು ಸ್ಪರ್ಧೆಯಲ್ಲಿ ಖುಷಿ ಹಂಚಿಕೊಂಡ ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್‌  –ಪ್ರಜಾವಾಣಿ ಚಿತ್ರ   

ಹಂಪಿ(ವಿಜಯನಗರ): ಕೊರಳ ತುಂಬ ಆಭರಣಗಳು, ಬಗೆ,ಬಗೆಯ ಉಡುಪುಗಳು, ಮೈ ತುಂಬ ಮೆಹಂದಿ, ಮದುವಣಗಿತ್ತಿಯಂತೆ ಸಿಂಗಾರ...

ಹಂಪಿ ಉತ್ಸವದ ಹಿನ್ನೆಲೆಯಲ್ಲಿ ಕಮಲಾಪುರದ ಹಂಪಿ ಪಾರಂಪರಿಕ ತಾಣ ಅಭಿವೃದ್ಧಿ ನಿರ್ವಹಣಾ ಪ್ರಾಧಿಕಾರದ (ಹವಾಮಾ) ಕಚೇರಿ ಹಿಂಭಾಗದಲ್ಲಿ ಪಶು ಸಂಗೋಪನ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ಟಗರುಗಳ ಪ್ರದರ್ಶನದಲ್ಲಿ ಸಿಂಗಾರಗೊಂಡಿದ್ದ ಟಗರುಗಳಿವು.

ಇದೇ ಮೊದಲ ಬಾರಿ ಉತ್ಸವದಲ್ಲಿ ಆಯೋಜಿಸಿದ್ದ ಟಗರುಗಳ ಪ್ರದರ್ಶನದಲ್ಲಿ ಹರಪನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹೊಸಪೇಟೆ, ಹಡಗಲಿ ಸೇರಿದಂತೆ ಹೊರ ಜಿಲ್ಲೆಯಿಂದ ಬಂದಿದ್ದ 64 ಟಗರುಗಳು ಗಮನ ಸೆಳೆದವು. ವಿದೇಶಿ ಪ್ರಜೆಗಳು ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಸಿದರು.

ADVERTISEMENT

ಮೈಲಾರಿ, ಜೈ ಭಜರಂಗಿ, ಕಾಟೇರ, ಪಡ್ಡೆಹುಲಿ, ರಾಯಣ್ಣ, ವೀರ, ಎಂ.ಎನ್.ಟಿ.ಹುಲಿ, ಉಗ್ರಂ, ವಿಜಯನಗರ ಪೈಟರ್ ಸೇರಿದಂತೆ ವಿಭಿನ್ನ ಹೆಸರುಗಳನ್ನು ಟಗರುಗಳಿಗೆ ಇಡಲಾಗಿತ್ತು. ಕೊಟ್ಟೂರು ತಾಲ್ಲೂಕಿನ ರಾಂಪುರ ಗ್ರಾಮದ ಪಾಪಣ್ಣ ಅವರ ಉಗ್ರಂ ಹೆಸರಿನ 99 ಕೆಜಿಯ 5 ವರ್ಷದ ಟಗರು ನೆರದವರನ್ನು ಆಕರ್ಶಿಸಿತು.

ಟಗರು ಕಂಡು ವಿದೇಶಿಯರಿಗೆ ಖುಷ್

ಬಳ್ಳಾರಿ, ಡೆಕ್ಕನಿ, ರಾಂಬುಲೆಟ್ ಕ್ರಾಸ್, ಎಳಗ, ಕೆಂಗುರಿ ಎಂಬ ಐದು ಜಾತಿಯ 64 ಟಗರುಗಳು ಪ್ರದರ್ಶನದಲ್ಲಿದ್ದವು. ಕಡ್ಡಿರಾಂಪುರದ ಪ್ರೇಮ ಅವರ ವಿಷ್ಣು ಹೆಸರಿನ ಟಗರಿಗೆ ಪ್ರಥಮ ಬಹುಮಾನ (₹10 ಸಾವಿರ), ಕೊಂಡನಾಯಕನಹಳ್ಳಿಯ ಮಾರುತಿ ಅವರ ವಿಜಯನಗರ ವೈಟ್ ಪೈಟರ್ ಹೆಸರಿನ ಟಗರಿಗೆ  ದ್ವಿತೀಯ ಬಹುಮಾನ (₹ 7,500), ಹಳೆಮಲ್ಲಪ್ಪನ ಗುಡಿಯ ಮೋಹನ್ ಅವರ ಗುಡ್ಡದ ಮಲ್ಲಯ್ಯ ಟಗರಿಗೆ  ತೃತೀಯ ಬಹುಮಾನ (₹ 5000) ದೊರೆಯಿತು.

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಪ್ರದರ್ಶನಕ್ಕೆ ಚಾಲನೆ ನೀಡಿದರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಟಗರುಗಳನ್ನು ವೀಕ್ಷಿಸಿದರು. ಡಾ.ಬಸವರಾಜ ಬಾಳಪ್ಪನವರ್ ತೀರ್ಪುಗಾರರಾಗಿದ್ದರು.
 

ಟಗರು ಸ್ಪರ್ಧೆಯಲ್ಲಿ ಗೆದ್ದ ಸಂಭ್ರಮ

ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಪೋಮ್ ಸಿಂಗ್, ಸಹಾಯಕ ನಿರ್ದೇಶಕ ಬಸವರಾಜ್ ಬೆಣ್ಣಿ,  ಕೊಟ್ಟೂರು ತಾಲ್ಲೂಕ ಸಹಾಯಕ ನಿರ್ದೇಶಕ ಕೊಟ್ರೇಶ್,ಕೆ.ವಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.