ಹೊಸಪೇಟೆ (ವಿಜಯನಗರ): ನಗರದ ಎಲ್ಲ ಚರ್ಚ್‌ಗಳಲ್ಲಿ ಶುಭ ಶುಕ್ರವಾರ (ಗುಡ್ ಫ್ರೈಡೇ) ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ದಿನವಿಡೀ ಉಪವಾಸವಿದ್ದ ಕ್ರೈಸ್ತ ಸಮುದಾಯದವರು ಮನುಕುಲದ ಒಳಿತಿಗಾಗಿ ಕ್ರಿಸ್ತರು ಮಾಡಿದ ಬಲಿದಾನವನ್ನು ಸ್ಮರಿಸಿದರು.
ನಗರದ ಹೃದಯ ಭಾಗದಲ್ಲಿರುವ ಕ್ಯಾಥೊಲಿಕ್ ಚರ್ಚ್‌ನಲ್ಲಿ ಧರ್ಮಗುರುಗಳಾದ ಫಾದರ್ ಭಗವಂತ ದಾಸ್, ಫಾ. ಸುಂದರ್, ಫಾ. ಜೋಸ್, ಫಾ. ಜೋನ್ ನೇತೃತ್ವದಲ್ಲಿ ಗುಡ್ ಫ್ರೈಡೇ ಪ್ರಧಾನ ಕಾರ್ಯಕ್ರಮ ನಡೆಯಿತು. ಏಸು ಕ್ರಿಸ್ತರ ಜೀವನವನ್ನು ಮತ್ತು ಶುಭ ಶುಕ್ರವಾರದ ಮಹತ್ವವನ್ನು ಬಿಂಬಿಸುವ ರೂಪಕ ಪ್ರದರ್ಶಿಸಲಾಯಿತು.
ಜೀಸಸ್ ಪಾತ್ರದಲ್ಲಿ ಜೋಲ್, ತಾಯಿ ಮೇರಿ ಪಾತ್ರದಲ್ಲಿ ನಿಕಿತಾ, ವೇರೋನಿಕ (ಯೇಸುವಿನ ಗಾಯದ ಮುಖವನ್ನು ಬಿಳಿ ವಸ್ತ್ರದಿಂದ ಒರೆಸಿದ್ದ ಮಹಿಳೆ) ಪಾತ್ರದಲ್ಲಿ ಹರಿಣಿ, ಯೇಸುವಿಗೆ ಶಿಲುಬೆಯ ಹೊರಲು ಸಹಾಯ ಮಾಡಿದ ವ್ಯಕ್ತಿ ಸಿಮೋನ್ ಪಾತ್ರದಲ್ಲಿ ಪೆಬಿನ್, ಸಿಪಾಯಿಗಳಾಗಿ ಮಿಷೆಲ್, ಮಾರ್ಷಲ್, ಲಾನ್ಸೆನ್, ವರುಣ್, ಪ್ರಭು, ಆಕಾಶ್, ಅಲಫಾನ್ಸ್, ರಾಜನ ಪಾತ್ರದಲ್ಲಿ ಪ್ರಶಾಂತ್ ಗಮನ ಸೆಳೆದರು.
ಗುಡ್ ಫ್ರೈಡೇ ಎಂದರೆ ಏಸು ಕ್ರಿಸ್ತರು ಶಿಲುಬೆಗೆ ಏರಿದ ದಿನ. ಮನುಷ್ಯರ ಪಾಪಗಳಿಗಾಗಿ ಏಸು ತಮ್ಮನ್ನು ತಾವು ಮರಣದಂಡನೆಗೆ ಗುರಿಪಡಿಸಿದ ದಿನ ಎಂದೂ ನಂಬಲಾಗಿದೆ. ಹೀಗಾಗಿ ಇದೊಂದು ಶೋಕದ ದಿನವೂ ಆಗಿದ್ದು, ಎರಡೇ ದಿನದಲ್ಲಿ ಅಂದರೆ ಈಸ್ಟರ್ ಸಂಡೆಯಂದು ಏಸು ಪುನರುತ್ಥಾನರಾಗಿ, ಸಮಾಧಿಯಿಂದ ಎದ್ದು ಬರುತ್ತಾರೆ ಎಂಬ ನಂಬಿಕೆ ಇದೆ. ಹೀಗಾಗಿ ಶನಿವಾರ ರಾತ್ರಿ ಇಡೀ ಪ್ರಾರ್ಥನೆಯಲ್ಲಿ ತೊಡಗುವ ಕ್ರೈಸ್ತರು ಭಾನುವಾರ ಈಸ್ಟರ್ ಸಂಡೇಯ ಸಂಭ್ರಮ ಆಚರಿಸುತ್ತಾರೆ.
ನಗರದ ಇತರ ಚರ್ಚ್‌ಗಳಲ್ಲಿ ಸಾಂಪ್ರದಾಯಿಕ ಪ್ರಾರ್ಥನೆ ನಡೆಯಿತು. ವೃದ್ಧರು, ಮಕ್ಕಳು, ಅನಾರೋಗ್ಯಪೀಡಿತರನ್ನು ಹೊರತುಪಡಿಸಿ ಉಳಿದೆಲ್ಲರೂ ಉಪವಾಸ ವ್ರತ ಆಚರಿಸಿದರು. ಈ ದಿನ ಕ್ರೈಸ್ತರು ಮಾಂಸ ಸೇವನೆ ಮಾಡದಿರುವುದು ಸಹ ವಿಶೇಷವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.