ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಕಮಲಾಪುರದ ಹೃದಯ ಭಾಗದಲ್ಲಿರುವ ಸರ್ಕಾರಿ ಬಾಲಕರ ಪ್ರೌಢಶಾಲೆಯ ವಿದ್ಯಾರ್ಥಿಗಳು ರಸ್ತೆ ಬದಿಯಲ್ಲೇ ಮೂತ್ರ ವಿಸರ್ಜನೆ ಮಾಡುವುದನ್ನು ಹಂಪಿ ನೋಡಲು ಬರುವ ವಿದೇಶಿ ಪ್ರವಾಸಿಗರು ಅಚ್ಚರಿಯಿಂದ ನೊಡುವ ಸ್ಥಿತಿ ಬಂದಿದ್ದು, ಶಾಲೆಯಲ್ಲಿ ಶೌಚಾಲಯ ಇಲ್ಲದಿರುವುದನ್ನು ಜಗಜ್ಜಾಹೀರುಗೊಳಿಸಿದೆ.
61 ವರ್ಷಗಳ ಹಿಂದೆ ನಿರ್ಮಾಣವಾದ ಈ ಶಾಲೆ ಕಮಲಾಪುರ ಸುತ್ತಮುತ್ತಲಿನ ಹಲವು ಹಳ್ಳಿಗಳಿಗೆ ಇರುವ ಏಕೈಕ ಸರ್ಕಾರಿ ಪ್ರೌಢಶಾಲೆ. 437 ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದು, ಶೌಚಾಲಯದ ಜತೆಗೆ ಕುಡಿಯುವ ನೀರು, ಸಮರ್ಪಕ ಕೊಠಡಿಗಳ ಸಮಸ್ಯೆ, ಕಾಯಂ ಶಿಕ್ಷಕರ ಕೊರತೆಯಂತಹ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರೇ ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ಆಟೋಟ, ದೈಹಿಕ ಕಸರತ್ತಿನ ಗಂಧ ಗಾಳಿಯೇ ಇಲ್ಲವಾಗಿದೆ.
ತರಗತಿ ಕೊಠಡಿಗಳ ಸಂಖ್ಯೆ ಕಡಿಮೆ ಇದೆ. ಕೆಲವೊಮ್ಮೆ ಪರೀಕ್ಷೆಗಳನ್ನು ಬಯಲಿನಲ್ಲೇ ನಡೆಸುವ ಸ್ಥಿತಿಯೂ ಇದೆ. ಕೊಠಡಿಗಳಲ್ಲಿನ ಫ್ಯಾನ್‌ಗಳ ರೆಕ್ಕೆಗಳು ಮುರಿದು ಹೋಗಿವೆ. ಕೆಲವು ಕೊಠಡಿಗಳ ಕಿಟಕಿ ಗಾಜು, ಬಾಗಿಲುಗಳನ್ನೇ ಕಳ್ಳರು ಕಿತ್ತು ಸಾಗಿಸಿದ್ದಾರೆ. ಇದು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರವೂ ಹೌದು. ಹೀಗಾಗಿ ಈ ಬಾರಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಲಾಗಿತ್ತು. ಪರೀಕ್ಷೆ ಮುಗಿದಂತೆ ಕ್ಯಾಮೆರಾಗಳೇ ನಾಪತ್ತೆ ಆಗಿವೆ.
‘ಠಾಣೆಗೆ ದೂರು ನೀಡಿದ್ದೇವೆ, ಪೊಲೀಸರಿಂದ ಬೀಟ್ ವ್ಯವಸ್ಥೆ ಮಾಡುವ ಭರವಸೆ ಸಿಕ್ಕಿದೆ, ಇಲ್ಲಿನ ಸ್ವತ್ತುಗಳನ್ನು ಕಾಪಾಡಿಕೊಳ್ಳುವುದೇ ಸವಾಲಿನ ಸಂಗತಿಯಾಗಿದೆ’ ಎಂದು ಮುಖ್ಯ ಶಿಕ್ಷಕಿ ಸುರೇಖಾ ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಶಾಲೆಯ ಹಿಂಭಾಗದಲ್ಲಿ ಬಾಲಕಿಯರ ಪ್ರೌಢಶಾಲೆ ಹಾಗೂ ಪಿಯು ಕಾಲೇಜು ಇದೆ. ಬಾಲಕಿಯರಿಗೆ ಶೌಚಾಲಯ ಇದೆ. ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಒಂದು ಶೌಚಾಲಯ ಇದೀಗ ಸಜ್ಜಾಗುತ್ತಿದ್ದು, ಸದ್ಯ ಅವರು ಸಹ ಬಯಲು ಶೌಚಾಲಯಕ್ಕೇ ಮೊರೆ ಹೋಗಿದ್ದಾರೆ. ಬಾಲಕರ ಪ್ರೌಢಶಾಲೆಗೆ ಹೋಲಿಸಿದರೆ ಪಿಯು ಕಾಲೇಜಿನಲ್ಲಿ ಸದ್ಯ ಶೌಚಾಲಯದ ದುರಸ್ತಿ ಕೆಲಸ ನಡೆಯುತ್ತಿದೆ. ಆದರೆ ಬಾಲಕರ ಪ್ರೌಢಶಾಲೆಯಲ್ಲಿ ಶೌಚಾಲಯವೇ ಇಲ್ಲ. ಶಾಲೆಯ ಕಾಂಪೌಂಡ್ ಸಹ ಸಮರ್ಪಕವಾಗಿಲ್ಲ. ಎಲ್ಲೆಂದರಲ್ಲಿ ಕಸದ ರಾಶಿಯ ಜತೆಗೆ, ಸಿಗರೇಟ್, ಗುಟ್ಕಾ ಮಾರಾಟವೂ ಶಾಲೆಯ ಬದಿಯಲ್ಲೇ ಎಗ್ಗಿಲ್ಲದೆ ಸಾಗಿದೆ.
ವಿದೇಶಿಯರು ಓಡಾಡುವ ಸ್ಥಳ: ಕಮಲಾಪುರದ ಪೆಟ್ರೋಲ್ ಬಂಕ್ ಎದುರಲ್ಲೇ ಇರುವ ಈ ಪ್ರೌಢಶಾಲೆಯ ವಿದ್ಯಾರ್ಥಿಗಳು ಮೂತ್ರ ವಿಸರ್ಜನೆಗೆ ರಸ್ತೆಯ ಅಕ್ಕಪಕ್ಕದಲ್ಲಿ ಹೋಗುವುದು ಅನಿವಾರ್ಯವಾಗಿದೆ. ಆದರೆ ಇಲ್ಲಿ ವಿದೇಶಿ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಓಡಾಡುತ್ತಿರುತ್ತಾರೆ. ನಮ್ಮ ಅರಿವಿಗೆ ಇಲ್ಲದೆಯೇ ನಮ್ಮ ಮಾನ ವಿದೇಶಿಯರ ಮುಂದೆ ಹರಾಜಾಗುತ್ತಿದೆ ಎಂದು ವಿದ್ಯಾರ್ಥಿಯೊಬ್ಬ ‘ಪ್ರಜಾವಾಣಿ’ ಜತೆ ಅಳಲು ತೋಡಿಕೊಂಡ. ಸರ್ಕಾರಿ ಶಾಲೆ ಹೇಗೆ ಇರಬಾರದು ಎಂಬುದಕ್ಕೆ ನಮ್ಮ ಶಾಲೆಯೇ ಉತ್ತಮ ನಿದರ್ಶನದಂತಿದೆ ಎಂದು ಇನ್ನೊಬ್ಬ ಬಾಲಕ ಬೇಸರದಿಂದ ನುಡಿದ.
‘ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಶಾಲೆಗೆ ಇಂತಹ ಸ್ಥಿತಿ ಬಂದಿದೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಎ.ಚಿದಾನಂದ ಆರೋಪಿಸಿದರು.
‘ಶಾಲೆಯ ಸ್ಥಿತಿಗತಿ ಕುರಿತಂತೆ ವರದಿ ಸಿದ್ಧಪಡಿಸಲು ಸೂಚಿಸಿದ್ದೇನೆ, ವಿಷಯ ಪರಿವೀಕ್ಷಕರು ವರದಿ ಸಿದ್ಧಪಡಿಸಲಿದ್ದಾರೆ, ಅದು ಕೈಸೇರಿದ ಬಳಿಕ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಡಿಡಿಪಿಐ ಎ.ಹನುಮಕ್ಕ ತಿಳಿಸಿದರು.
ನಮ್ಮೂರ ಶಾಲೆ ನಮಗೆ ಹೆಮ್ಮೆ. ಆದರೆ ಶಾಲೆಯ ಸ್ಥಿತಿ ನೋಡಿದರೆ ನೋವಾಗುತ್ತದೆ. ಇನ್ನಾದರೂ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಶಾಲೆ ಅಭಿವೃದ್ಧಿ ಮಾಡಬೇಕು
- ದೇವರಮನೆ ಕನ್ನೇಶ್ವರ ಕಮಲಾಪುರ ಪುರಸಭೆ ನಾಮ ನಿರ್ದೇಶಿತ ಸದಸ್ಯ
ರಾಜ್ಯ ಸರ್ಕಾರ ಗ್ಯಾರಂಟಿಗಳಿಗೆ ಅನುದಾನ ನೀಡುವಂತೆ ಶಿಕ್ಷಣಕ್ಕೆ ಪ್ರತ್ಯೇಕ ಅನುದಾನ ನೀಡಿ ಶಾಲೆಗಳ ಅಭಿವೃದ್ಧಿ ಮಾಡಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ'
- ಬಿ.ಎಂ.ಹುಲುಗಪ್ಪ ಜಿಲ್ಲಾ ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ
ಶೇ 41ರಷ್ಟು ಫಲಿತಾಂಶ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಯ ಫಲಿತಾಂಶ ಕೇವಲ ಶೇ 41ರಷ್ಟು. ಸುತ್ತಮುತ್ತಲಿನ ಹಂಪಿ ಕಡ್ಡಿರಾಂಪುರ ಬುಕ್ಕಸಾಗರ ವೆಂಕಟಾಪುರ ಸಹಿತ ಹತ್ತಾರು ಹಳ್ಳಿಗಳಿಗೆ ಇರುವ ಸರ್ಕಾರಿ ಪ್ರೌಢಶಾಲೆ ಇದೊಂದೇ. ಬಡವರು ಕೂಲಿಕಾರ್ಮಿಕರ ಮಕ್ಕಳೇ ಅಧಿಕ ಸಂಖ್ಯೆಯಲ್ಲಿ ಬರುವ ಈ ಶಾಲೆಯಲ್ಲಿ ಮೂಲಸೌಲಭ್ಯ ಕೊರತೆ ಅವರ ಶೈಕ್ಷಣಿಕ ಸಾಧನೆಯ ಮೇಲೂ ಪರಿಣಾಮ ಬೀರುತ್ತಿದೆ. ಪರೋಕ್ಷವಾಗಿ ಈ ಎಲ್ಲ ಗ್ರಾಮೀಣ ಪ್ರದೇಶದ ಮಕ್ಕಳ ಉನ್ನತ ಶಿಕ್ಷಣದ ಕನಸನ್ನು ಹೊಸಕಿ ಹಾಕುತ್ತಿದೆ ಎಂದು ಹಲವು ಪೋಷಕರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.