ಹೂವಿನಹಡಗಲಿ: ತಾಲ್ಲೂಕಿನ ಹೊಳಗುಂದಿ ಗ್ರಾಮ ಪಂಚಾಯಿತಿ ಸದಸ್ಯ ಎಂ. ರುದ್ರಗೌಡ ಅವರು ಪ್ರತಿ ತಿಂಗಳು ಪಂಚಾಯಿತಿಯಿಂದ ನೀಡುವ ₹2 ಸಾವಿರ ಗೌರವಧನವನ್ನು ಬಡ ಕುಟುಂಬಗಳ ಮೃತ ಸದಸ್ಯರ ಅಂತ್ಯಕ್ರಿಯೆಗೆ ವಿನಿಯೋಗಿಸುತ್ತಾರೆ.
ಗ್ರಾಮದ 5ನೇ ವಾರ್ಡ್‌ನ ಸದಸ್ಯರಾದ ರುದ್ರಗೌಡ ಪ್ರತಿ ತಿಂಗಳು ಪಂಚಾಯಿತಿಯಿಂದ ಸಿಗುವ ಗೌರವಧನವನ್ನು ಬಡಜನರ ಅಂತ್ಯಕ್ರಿಯೆಗೆ ಮೀಸಲಿಡುತ್ತಾರೆ. ವಾರ್ಡ್‌ನ ಯಾರ ಮನೆಯಲ್ಲಾದರೂ ಸಾವಾದರೂ ಜಾತಿ ಭೇದ ಮಾಡದೇ, ಅಲ್ಲಿ ಹಾಜರಾಗಿ ವಿಧಿವಿಧಾನ ನಡೆಸಲು ಸಹಕರಿಸುತ್ತಾರೆ. ಕುಟುಂಬದವರಿಗೆ ಸಾಂತ್ವನ ಹೇಳಿ, ₹2 ಸಾವಿರ ಮತ್ತು ಅದಕ್ಕೂ ಹೆಚ್ಚಿನ ನೆರವು ನೀಡುತ್ತಾರೆ. ಮೂರೂವರೆ ವರ್ಷದಲ್ಲಿ 25ಕ್ಕೂ ಹೆಚ್ಚು ಜನರ ಅಂತ್ಯಕ್ರಿಯೆಗೆ ನೆರವಾಗಿದ್ದಾರೆ.
‘ವಾರ್ಡ್‌ನಲ್ಲಿ ಸೌಲಭ್ಯ ವಂಚಿತರಿಗೆ ಪಡಿತರ ಚೀಟಿ, ಆಯುಷ್ಮಾನ್ ಭಾರತ್ ಕಾರ್ಡ್, ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ಸೌಲಭ್ಯ ಕೊಡಿಸಿದ್ದಾರೆ. 5ನೇ ವಾರ್ಡ್ ಹೆಸರಲ್ಲಿ ವಾಟ್ಸ್ಆ್ಯಪ್ ಗ್ರೂಪ್ ರಚಿಸಿದ್ದಾರೆ. ಬೀದಿದೀಪ, ಕುಡಿಯುವ ನೀರು, ನೈರ್ಮಲ್ಯ ಸಮಸ್ಯೆಯನ್ನು ಜನರು ಗ್ರೂಪ್‌ನಲ್ಲಿ ಹಂಚಿಕೊಂಡರೆ, ಅದನ್ನು ಪಂಚಾಯಿತಿ ಸಿಬ್ಬಂದಿಗೆ ರವಾನಿಸಿ ಸಮಸ್ಯೆಗೆ ಸ್ಪಂದಿಸುತ್ತಾರೆ’ ಎಂದು ಗ್ರಾಮಸ್ಥ ಬೆಟಗೇರಿ ಬಸವರಾಜ ತಿಳಿಸಿದರು.
‘ಕಷ್ಟಸುಖದಲ್ಲಿ ಭಾಗಿಯಾಗುವೆ ಎಂದು ಚುನಾವಣೆ ವೇಳೆ ಜನರಿಗೆ ಮಾತು ಕೊಟ್ಟಿದ್ದೆ. ಅದರಂತೆ ಬಡವರ ಅಂತ್ಯಕ್ರಿಯೆಗೆ ಗೌರವಧನ ಮೀಸಲಿಟ್ಟಿರುವೆ. ಜನರಿಗೆ ನೆರವಾಗುತ್ತಿರುವೆ’ ಎಂದು ರುದ್ರಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.