
ಹೂವಿನಹಡಗಲಿ: ತಾಲ್ಲೂಕಿನ ಮೈಲಾರ ಗ್ರಾಮದಲ್ಲಿ ಆರು ವರ್ಷಗಳ ಹಿಂದೆ ಕೈಗೆತ್ತಿಕೊಂಡಿದ್ದ ಗ್ರಾಮ ಪಂಚಾಯಿತಿಯ ‘ಗ್ರಾಮಸೌಧ’ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.
ನರೇಗಾ ಯೋಜನೆ, ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತೀಕರಣ ಅಭಿಯಾನ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಅನುದಾನ ಕ್ರೋಡೀಕರಿಸಿ ಒಟ್ಟು ₹60 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಗ್ರಾಮ ಪಂಚಾಯಿತಿ ಕಚೇರಿ ‘ಗ್ರಾಮಸೌಧ’ ನಿರ್ಮಾಣಕ್ಕೆ 2019ರಲ್ಲಿ ಚಾಲನೆ ನೀಡಲಾಗಿತ್ತು.
ನರೇಗಾ ಯೋಜನೆಯ ₹28 ಲಕ್ಷ ಲಭ್ಯ ಅನುದಾನ ಖರ್ಚು ಮಾಡಿ ನೆಲ ಹಾಗೂ ಮೊದಲ ಮಹಡಿಯ ಕಟ್ಟಡ ನಿರ್ಮಿಸಲಾಗಿದೆ. ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತೀಕರಣ ಅಭಿಯಾನ (ಆರ್ ಜಿಪಿಎಸ್ಎ) ಅನುದಾನ, ಸ್ಥಳೀಯ ಜನಪ್ರತಿನಿಧಿಗಳ ಅನುದಾನ ಈವರೆಗೂ ಬಿಡುಗಡೆಯಾಗದೇ ಕಾಮಗಾರಿ ಅಪೂರ್ಣಗೊಂಡಿದೆ.
ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಮೈಲಾರದಲ್ಲಿ ಗ್ರಾಮ ಪಂಚಾಯಿತಿ ಕಚೇರಿಗೆ ಸುಸಜ್ಜಿತ ಕಟ್ಟಡ ಇರಲಿಲ್ಲ. ಚಾವಣಿಗೆ ಹೆಂಚು ಹೊದಿಸಿದ್ದ ಶಿಥಿಲ ಕಟ್ಟಡದಲ್ಲೇ ಪಂಚಾಯಿತಿ ಕಚೇರಿ ಇತ್ತು. ಬಳ್ಳಾರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಕೆ.ವಿ.ರಾಜೇಂದ್ರ ಅವರು 2018ರಲ್ಲಿ ಪಂಚಾಯಿತಿಯ ಶಿಥಿಲ ಕಟ್ಟಡದ ಅವಸ್ಥೆ ನೋಡಿ, ಮೈಲಾರ, ಸೋಗಿಯಲ್ಲಿ ‘ಗ್ರಾಮಸೌಧ’ ನಿರ್ಮಾಣಕ್ಕೆ ಜಿಲ್ಲಾಡಳಿತದಿಂದ ಯೋಜನೆ ರೂಪಿಸಿದ್ದರು.
ಸುಸಜ್ಜಿತ ಸಭಾ ಭವನ, ಅಧ್ಯಕ್ಷ, ಪಿಡಿಒ ಕೊಠಡಿಗಳು, ಸ್ಥಳೀಯ ಆಡಳಿತ ಸೇವೆ ಒಂದೇ ಸೂರಿನಲ್ಲಿ ಒದಗಿಸುವ ವ್ಯವಸ್ಥೆ ಒಳಗೊಂಡ ನವೀನ ವಿನ್ಯಾಸದ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಸೋಗಿಯ ಗ್ರಾಮಸೌಧ ಇತ್ತೀಚಿಗೆ ಲೋಕಾರ್ಪಣೆಯಾಗಿದ್ದರೆ, ಮೈಲಾರ ಸೌಧ ಅನುದಾನ ಕೊರತೆಯಿಂದ ಅಪೂರ್ಣಗೊಂಡಿದೆ.
ಮೈಲಾರ ಗ್ರಾಮ ಪಂಚಾಯಿತಿಗೆ ಸುಸಜ್ಜಿತ ಕಟ್ಟಡವಿಲ್ಲದೇ ನಾನಾ ಸಮಸ್ಯೆ ಎದುರಿಸುವಂತಾಗಿದೆ. ಕಲಾ ಭವನದಲ್ಲಿ ಪಂಚಾಯಿತಿ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ‘ಇದೊಂದು ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರವಾಗಿರುವುದರಿಂದ ಭಕ್ತರಿಗೆ, ಗ್ರಾಮಸ್ಥರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸುಸಜ್ಜಿತ ಕಚೇರಿ ಕಟ್ಟಡದ ಅವಶ್ಯಕತೆ ಇದೆ. ಬಾಕಿ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮಸೌಧ ಪೂರ್ಣಗೊಳಿಸುವಂತೆ ಜಿ.ಪಂ. ತಾ.ಪಂ. ಅಧಿಕಾರಿಗಳಿಗೆ ಶಾಸಕರಿಗೆ ಮನವಿ ಮಾಡಿದ್ದೇವೆ. ಈವರೆಗೂ ಅನುದಾನ ಬಿಡುಗಡೆಗೊಳಿಸಿಲ್ಲ–ಜಾನಕಮ್ಮ ತಳವಾರ, ಗ್ರಾ.ಪಂ. ಅಧ್ಯಕ್ಷೆ ಮೈಲಾರ
ನರೇಗಾ ಅನುದಾನ ಬಳಸಿ ಕಟ್ಟಡ ನಿರ್ಮಿಸಲಾಗಿದೆ. ಬಾಕಿ ಕಾಮಗಾರಿ ಪೂರ್ಣಗೊಳಿಸಲು ಆರ್ ಜಿಪಿಎಸ್ಎ ಅನುದಾನ ಬಿಡುಗಡೆ ಕೋರಿ ಪತ್ರ ಬರೆದಿದ್ದೇವೆ.–ಜಿ.ಪರಮೇಶ್ವರ ಇಒ ತಾ.ಪಂ. ಹಡಗಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.